
ಕೋಲಾರ , ಅಕ್ಟೋಬರ್ ೨೫ (ಹಿ.ಸ.) : ರಾಜ್ಯ ಸರ್ಕಾರವು ನೀಡುವ ಪ್ರತಿಷ್ಠಿತ ೨೦೨೬-೨೭ನೇ ಸಾಲಿನ ‘ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ಗೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಹಿರಿಯ ಸಮಾಜ ಸೇವಕರಾದ ಶ್ರೀ ವೆಂಕಟರಾಮ್ ಅವರು ಭಾಜನರಾಗಿದ್ದಾರೆ. ಇವರ ಈ ವಿಶೇಷ ಸಾಧನೆಗೆ ಕೋಲಾರ ಜಿಲ್ಲಾಧಿಕಾರಿ ಶ್ರೀ ಎಂ.ಆರ್. ರವಿಕುಮಾರ್ ಸೇರಿದಂತೆ ಜಿಲ್ಲೆಯ ಅನೇಕ ಗಣ್ಯರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ಅಕ್ಟೋಬರ್ ೨೬ರಂದು ರಾಜ್ಯ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಜ್ಯದ ಒಟ್ಟು ೧೦ ಮಂದಿ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಲಸಂಪನ್ಮೂಲ ಇಲಾಖೆಯ ಮಾಜಿ ಕಾರ್ಯದರ್ಶಿ ಹಾಗೂ ಕೆಪಿಎಸ್ಸಿ ಮಾಜಿ ಸದಸ್ಯರಾದ ಶ್ರೀ ಜಿ.ಟಿ. ಚಂದ್ರಶೇಖರಪ್ಪ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯು ರಾಜ್ಯಾದ್ಯಂತ ಸಲ್ಲಿಕೆಯಾಗಿದ್ದ ೧೩೭ ಅರ್ಜಿಗಳನ್ನು ಪರಿಶೀಲಿಸಿ, ಬೆಂಗಳೂರು ವಿಭಾಗದ ಸಾಮಾಜಿಕ ಸೇವಾ ಕ್ಷೇತ್ರದಿಂದ ಮಾಲೂರಿನ ಶ್ರೀ ವೆಂಕಟರಾಮ್ ಅವರನ್ನು ಆಯ್ಕೆ ಮಾಡಿದೆ.
ಪರಿಶಿಷ್ಟ ಪಂಗಡದ ಜನರ ಏಳಿಗೆಗಾಗಿ ಶ್ರಮಿಸಿದ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಗುರುತಿಸಿ ನೀಡಲಾಗುವ ಈ ಪ್ರಶಸ್ತಿಯು ತಲಾ ₹೫ ಲಕ್ಷ ನಗದು ಬಹುಮಾನ ಹಾಗೂ ೨೫ ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ಅಕ್ಟೋಬರ್ ೨೬ರಂದು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಶ್ರೀ ವೆಂಕಟರಾಮ್ ಅವರಿಗೆ ಈ ಗೌರವವನ್ನು ಪ್ರದಾನ ಮಾಡಲಾಗುವುದು.
ಮಾಲೂರಿನ ವೆಂಕಟರಾಮ್ ಅವರು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಇಡೀ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ಶ್ರೀ ಎಂ.ಆರ್. ರವಿಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳು ಇತರರಿಗೆ ಮಾದರಿ ಎಂದು ಶ್ಲಾಘಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ಮೈಲಾರಪ್ಪ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಮತ್ತು ಸಮುದಾಯದ ಮುಖಂಡರು ವೆಂಕಟರಾಮ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಶ್ರೀ ವೆಂಕಟರಾಮ್ ಅವರೊಂದಿಗೆ ಧಾರವಾಡದ ಶ್ರೀ ತೇಜಸ್ವಿ ಕಟ್ಟಿಮನಿ (ಶೈಕ್ಷಣಿಕ), ಚಿತ್ರದುರ್ಗದ ಶ್ರೀ ತಿಪ್ಪಣ್ಣ ಮರಿಕುಂಟೆ (ಸಾಹಿತ್ಯ), ಬೆಂಗಳೂರು ಗ್ರಾಮಾಂತರದ ಶ್ರೀ ಆರ್.ಎಂ. ಮುನಿರಾಜು (ಸಾಂಸ್ಕೃತಿಕ), ಮೈಸೂರಿನ ಡಾ. ಚಂದ್ರನಾಯಕ್ ಎಸ್. (ವಿಜ್ಞಾನ ಮತ್ತು ತಂತ್ರಜ್ಞಾನ), ಕೊಡಗಿನ ಶ್ರೀ ಜೆ.ಪಿ. ರಾಜು, ಗದಗದ ಶ್ರೀ ಶಿವನಗೌಡ ಹೊನ್ನನಗೌಡ ಪಾಟೀಲ, ಕಲಬುರಗಿಯ ಶ್ರೀ ನಂದಕುಮಾರ ಮಾಲಿ ಪಾಟೀಲ, ಚಾಮರಾಜನಗರದ ಶ್ರೀಮತಿ ಕೇತಮ್ಮ ಹಾಗೂ ತುಮಕೂರಿನ ಶ್ರೀ ಬಿ.ಜಿ. ಕೃಷ್ಣಪ್ಪ (ಸಾಮಾಜಿಕ ಸೇವೆ) ಅವರುಗಳಿಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್