
ಬೆಂಗಳೂರು, 25 ಅಕ್ಟೋಬರ್ (ಹಿ.ಸ.):
ಪೌರಾಡಳಿತ ನಿರ್ದೇಶನಾಲಯ, ನೌಕರರ ರಾಜ್ಯ ವಿಮಾ ಯೋಜನೆ (ಇಎಸ್ಐ) ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ವೃಂದದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೇಳಾಪಟ್ಟಿ ಪ್ರಕಟಿಸಿದೆ.
ನವೆಂಬರ್ 6, 7 ಮತ್ತು 14ರಂದು ನಿರ್ದಿಷ್ಟ ಪತ್ರಿಕೆ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪರೀಕ್ಷೆಗಳು ನಡೆಯಲಿವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಪೌರಾಡಳಿತ ನಿರ್ದೇಶನಾಲಯದ ಎಲೆಕ್ಟ್ರೀಷಿಯನ್ ಗ್ರೇಡ್-1ರ ಮೂರು ಹುದ್ದೆಗಳು ಹಾಗೂ ಗ್ರೇಡ್-2ರ ಐದು ಹುದ್ದೆಗಳ ನೇಮಕಾತಿಗಾಗಿ ನವೆಂಬರ್ 6ರಂದು ಲಿಖಿತ ಪರೀಕ್ಷೆ ನಡೆಯಲಿದೆ.
ಇಎಸ್ಐ ಇಲಾಖೆಯ 11 ಫಾರ್ಮಸಿ ಅಧಿಕಾರಿ ಹುದ್ದೆಗಳು ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ 23 ಶುಶ್ರೂಷಾಧಿಕಾರಿ ಹುದ್ದೆಗಳು ಮತ್ತು 11 ನರ್ಸಿಂಗ್ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ನವೆಂಬರ್ 7ರಂದು ಪರೀಕ್ಷೆ ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನು ಪೌರಾಡಳಿತ ನಿರ್ದೇಶನಾಲಯದ ನೀರು ಸರಬರಾಜು ಆಪರೇಟರ್ನ 122 ಹುದ್ದೆಗಳು ಹಾಗೂ ಸಹಾಯಕ ನೀರು ಸರಬರಾಜು ಆಪರೇಟರ್ನ 80 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ನಿರ್ದಿಷ್ಟ ಪತ್ರಿಕೆಯ ಪರೀಕ್ಷೆ ನವೆಂಬರ್ 14ರಂದು ನಡೆಯಲಿದೆ. ಅದೇ ದಿನ ಮಧ್ಯಾಹ್ನದ ನಂತರ ಈ ಹುದ್ದೆಗಳಿಗೆ ಸಾಮಾನ್ಯ ಜ್ಞಾನ ಪರೀಕ್ಷೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.
ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಕೆಇಎ ಪ್ರಕಟಿಸಿರುವ ಅಧಿಕೃತ ವೇಳಾಪಟ್ಟಿಯನ್ನು ಪರಿಶೀಲಿಸಿ, ಪರೀಕ್ಷೆಯ ದಿನಾಂಕ ಹಾಗೂ ಸಮಯಕ್ಕೆ ಅನುಗುಣವಾಗಿ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R