ಕೆಂಪೇಗೌಡ ಜಯಂತಿ ಅಂಗವಾಗಿ ಜಿಬಿಎ ಅಧಿಕಾರಿ–ಸಿಬ್ಬಂದಿಗೆ ಕ್ರೀಡಾಕೂಟ
ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹಾಗೂ ಜಿಬಿಎ ಅಧಿಕಾರಿ–ಸಿಬ್ಬಂದಿಗಾಗಿ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕ್ರೀಡಾಕೂಟಕ್ಕೆ ಜಂಟಿ ಆಯುಕ್ತ ಡಾ. ಎನ್. ಮಧು ಚಾಲನೆ ನೀಡಿದರು.
kempegowda-jayanti-gba-officials-staff-sports-meet-bengaluru


ಬೆಂಗಳೂರು, 23 ಅಕ್ಟೋಬರ್ (ಹಿ.ಸ.):

ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿ ಮತ್ತು ನೌಕರರಿಗಾಗಿ ಆಯೋಜಿಸಿರುವ ಐದು ದಿನಗಳ ಕ್ರೀಡಾಕೂಟಕ್ಕೆ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಂಟಿ ಆಯುಕ್ತ ಡಾ. ಎನ್. ಮಧು ಅವರು ಚಾಲನೆ ನೀಡಿದರು.

ನಗರದ ಜಯನಗರದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಡಾ. ಎನ್. ಮಧು ಅವರು, ಕ್ರೀಡೆಯಲ್ಲಿ ಗೆಲುವು ಮತ್ತು ಸೋಲು ಮುಖ್ಯವಲ್ಲ. ಕ್ರೀಡಾಸ್ಫೂರ್ತಿಯಿಂದ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವುದೇ ಮುಖ್ಯ ಎಂದು ಹೇಳಿದರು.

ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ

ದೈನಂದಿನ ಕರ್ತವ್ಯಗಳ ಒತ್ತಡದ ನಡುವೆಯೂ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ವಾಕಿಂಗ್ ಮಾಡುವುದು ಅಥವಾ ಯಾವುದಾದರೂ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ. ಇಂತಹ ಚಟುವಟಿಕೆಗಳು ದೇಹವನ್ನು ಚಟುವಟಿಕೆಯಿಂದ ಇಡುವುದರ ಜತೆಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಮಹಿಳಾ ಸಿಬ್ಬಂದಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ ಮತ್ತು ನೌಕರರು ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಹಲವು ಕ್ರೀಡಾ ಸ್ಪರ್ಧೆಗಳ ಆಯೋಜನೆ

ಕ್ರೀಡಾಕೂಟದಲ್ಲಿ 100 ಮತ್ತು 200 ಮೀಟರ್ ಓಟ, ನಡಿಗೆ, ಗುಂಡು ಎಸೆತ ಸೇರಿದಂತೆ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಫುಟ್ಬಾಲ್, ವಾಲಿಬಾಲ್, ಕಬಡ್ಡಿ, ಎಂಟು ಓವರ್ಗಳ ಕ್ರಿಕೆಟ್, ತ್ರೋಬಾಲ್, ಡಾಡ್ಜ್ಬಾಲ್, ಬಾಲ್ ಬ್ಯಾಡ್ಮಿಂಟನ್ ಹಾಗೂ ಹಗ್ಗದ ಸೆಳೆತ ಸ್ಪರ್ಧೆಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಬಿ.ಸಿ. ಭುವನೇಶ್ವರಿ, ವೆಂಕಟಕೃಷ್ಣಪ್ಪ ಸೇರಿದಂತೆ ಪಾಲಿಕೆಯ ವಿವಿಧ ಅಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande