
ಶಿವಮೊಗ್ಗ, 21 ಅಕ್ಟೋಬರ್ (ಹಿ.ಸ.):
ಮೈಸೂರು ದಸರೆಯ ಮಾದರಿಯಲ್ಲಿ ಶಿವಮೊಗ್ಗದಲ್ಲೂ ಅದ್ಧೂರಿಯಾಗಿ ದಸರಾ ಆಚರಿಸಲಾಗುತ್ತಿದ್ದು, ಬುಧವಾರ ನಡೆದ ಜಂಬೂ ಸವಾರಿ ಮೆರವಣಿಗೆಯಲ್ಲಿ ಬೆಳ್ಳಿಯ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ ದಿಢೀರ್ ಬೆದರಿದ ಘಟನೆ ನಡೆದಿದೆ.
ಆನೆ ಬೆದರಿದ ಪರಿಣಾಮ ಕಾರೊಂದು ಜಖಂಗೊಂಡಿದ್ದು, ಸ್ಥಳದಲ್ಲಿದ್ದ ಜನರು ಆತಂಕಗೊಂಡು ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಸಕ ಚನ್ನಬಸಪ್ಪ ಅವರು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಕೋಟೆ ಶಿವಪ್ಪನಾಯಕ ಅರಮನೆಯಿಂದ ಅಲ್ಲಮಪ್ರಭು ಮೈದಾನದವರೆಗೆ ಮೆರವಣಿಗೆ ಸಾಗಿತು.
ಈ ಬಾರಿ ಮೊದಲ ಬಾರಿಗೆ ಸೋಮಣ್ಣ ಆನೆ ಬೆಳ್ಳಿಯ ಅಂಬಾರಿ ಹೊತ್ತಿದ್ದು, ಸಾಗರ್ ಮತ್ತು ಬಹದ್ದೂರ್ ಆನೆಗಳು ಮೆರವಣಿಗೆಯಲ್ಲಿ ಸಾಥ್ ನೀಡಿದ್ದವು.
ಮೆರವಣಿಗೆಯು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಸಾಗುತ್ತಿದ್ದ ವೇಳೆ ಜನರ ಗುಂಪನ್ನು ಕಂಡು ಸೋಮಣ್ಣ ಆನೆ ಬೆದರಿದೆ ಎನ್ನಲಾಗಿದೆ.
ಬಳಿಕ ಆನೆ ಏಕಾಏಕಿ ವಾಸವಿ ಶಾಲೆಯತ್ತ ದೌಡಾಯಿಸಿದ್ದು, ಅದರ ಆರ್ಭಟಕ್ಕೆ ಕಾರೊಂದು ಜಖಂಗೊಂಡಿದೆ. ಆನೆಯ ಚಲನವಲನ ಕಂಡು ಭಯಭೀತರಾದ ಜನರು ಸುರಕ್ಷಿತ ಸ್ಥಳಗಳಿಗೆ ಓಡಿದ್ದಾರೆ.
ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಿಂದ ಫ್ರೀಡಂ ಪಾರ್ಕ್ನತ್ತ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆನೆಯನ್ನು ನಿಯಂತ್ರಣಕ್ಕೆ ತರಲು ಮಾವುತರು, ಕಾವಾಡಿಗರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸಪಟ್ಟರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R