ಗೃಹಜ್ಯೋತಿ ಯೋಜನೆಯಿಂದ 1.3 ಲಕ್ಷ ಗ್ರಾಹಕರು ಹೊರಕ್ಕೆ
ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯುತ್ತಿದ್ದ ರಾಜ್ಯದ 1.3 ಲಕ್ಷ ಗ್ರಾಹಕರು ವೈಯಕ್ತಿಕ ದಾಖಲೆ ನೀಡಲು ನಿರಾಕರಿಸಿ ಯೋಜನೆಯಿಂದ ಹೊರಗುಳಿದಿದ್ದಾರೆ. ದಾಖಲೆ ಸಲ್ಲಿಸದ ಫಲಾನುಭವಿಗಳು ಅಕ್ಟೋಬರ್ 31ರೊಳಗೆ ಬೆಸ್ಕಾಂ ಉಪವಿಭಾಗೀಯ ಕಚೇರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
1-3-lakh-consumers-opt-out-of-karnataka-gruhajyothi-scheme


ಬೆಂಗಳೂರು, 20 ಅಕ್ಟೋಬರ್ (ಹಿ.ಸ.):

ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದ ಸುಮಾರು 1.3 ಲಕ್ಷ ಗ್ರಾಹಕರು ಯೋಜನೆಯಿಂದ ಸ್ವಯಂಪ್ರೇರಿತರಾಗಿ ಹೊರಗುಳಿಯಲು ನಿರ್ಧರಿಸಿದ್ದಾರೆ. ಮನೆಮನೆ ಪರಿಶೀಲನೆ ವೇಳೆ ಆಧಾರ್, ಪಾನ್ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆಗಳನ್ನು ನೀಡಲು ನಿರಾಕರಿಸಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ವೈಯಕ್ತಿಕ ಮಾಹಿತಿಯ ಗೌಪ್ಯತೆ ಹಾಗೂ ದಾಖಲೆಗಳ ದುರುಪಯೋಗದ ಆತಂಕದಿಂದ ಕೆಲವು ಗ್ರಾಹಕರು ಮಾಹಿತಿ ಹಂಚಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಸ್ಕಾಂ ವ್ಯಾಪ್ತಿಯಲ್ಲೇ 1.2 ಲಕ್ಷ ಗ್ರಾಹಕರ ನಿರಾಕರಣೆ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವ್ಯಾಪ್ತಿಯಲ್ಲೇ ಸುಮಾರು 1.2 ಲಕ್ಷ ಗ್ರಾಹಕರು ದಾಖಲೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಮನೆಮನೆಗೆ ಭೇಟಿ ನೀಡಿದ ಸಿಬ್ಬಂದಿಗೆ ಅಗತ್ಯ ದಾಖಲೆಗಳನ್ನು ಒದಗಿಸಲು ಕೆಲವರು ಒಪ್ಪಿಲ್ಲ. ವಿಶೇಷವಾಗಿ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುವ ಕೆಲವು ನಿವಾಸಿಗಳು ವೈಯಕ್ತಿಕ ಮಾಹಿತಿಯ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 2.1 ಕೋಟಿ ಗೃಹ ಬಳಕೆಯ ವಿದ್ಯುತ್ ಸಂಪರ್ಕಗಳಿದ್ದು, ಈ ಪೈಕಿ 1.8 ಕೋಟಿ ಗ್ರಾಹಕರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದರು. ಪರಿಶೀಲನೆ ವೇಳೆ ಸುಮಾರು 25.7 ಲಕ್ಷ ಗ್ರಾಹಕರು ನಿಗದಿತ ಅವಧಿಯಲ್ಲಿ ಲಭ್ಯವಾಗದಿರುವುದು ಅಥವಾ ಅಗತ್ಯ ದಾಖಲೆಗಳನ್ನು ಸಲ್ಲಿಸದಿರುವುದು ಬೆಳಕಿಗೆ ಬಂದಿದೆ.

ಅ.31ರೊಳಗೆ ದಾಖಲೆ ಸಲ್ಲಿಸಲು ಅವಕಾಶ

ಪರಿಶೀಲನೆಗೆ ಒಳಪಡದ ಗ್ರಾಹಕರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಸಂಬಂಧಪಟ್ಟ ಗ್ರಾಹಕರು ತಮ್ಮ ಸಮೀಪದ ಬೆಸ್ಕಾಂ ಉಪವಿಭಾಗೀಯ ಕಚೇರಿಗೆ ಭೇಟಿ ನೀಡಿ ಅಕ್ಟೋಬರ್ 31ರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ನಿಗದಿತ ಗಡುವಿನೊಳಗೆ ದಾಖಲೆ ಸಲ್ಲಿಸದವರನ್ನು ಯೋಜನೆಯಿಂದ ಶಾಶ್ವತವಾಗಿ ಹೊರಗಿಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

16 ಲಕ್ಷ ಗ್ರಾಹಕರ ದಾಖಲೆ ಇನ್ನೂ ಲಭ್ಯವಿಲ್ಲ

ಬೆಸ್ಕಾಂ ವ್ಯಾಪ್ತಿಯ ಸುಮಾರು 69 ಲಕ್ಷ ಫಲಾನುಭವಿಗಳ ಪೈಕಿ 16 ಲಕ್ಷ ಮಂದಿಯ ವಿವರಗಳು ಹಾಗೂ ದಾಖಲೆಗಳು ಇನ್ನೂ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. ಮನೆಗಳಿಗೆ ಬೀಗ ಹಾಕಿರುವುದು, ಬಾಡಿಗೆದಾರರು ಸ್ಥಳಾಂತರಗೊಂಡಿರುವುದು ಸೇರಿದಂತೆ ಹಲವು ಕಾರಣಗಳಿಂದ ಸಿಬ್ಬಂದಿಗೆ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಿಲ್ಲ. ಕೆಲವು ಮನೆಗಳಿಗೆ ಮೂರ್ನಾಲ್ಕು ಬಾರಿ ಭೇಟಿ ನೀಡಿದರೂ ಪರಿಶೀಲನೆ ಪೂರ್ಣಗೊಳಿಸಲಾಗಿಲ್ಲ.

ದಾಖಲೆ ನೀಡಲು ನಿರಾಕರಿಸಿರುವ ಗ್ರಾಹಕರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಕುರಿತು ಇಂಧನ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಲಾಗುವುದು. ಸರ್ಕಾರದ ಮುಂದಿನ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೀಗಾಗಿ, ಗೃಹಜ್ಯೋತಿ ಯೋಜನೆಯ ಸೌಲಭ್ಯ ಮುಂದುವರಿಸಿಕೊಳ್ಳಲು ಬಯಸುವ, ಪರಿಶೀಲನೆ ಪೂರ್ಣಗೊಳಿಸದ ಗ್ರಾಹಕರು ಅಕ್ಟೋಬರ್ 31ರೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಮುಖ್ಯವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande