ಸುಸ್ಥಿರತೆ, ತ್ಯಾಜ್ಯ ನಿರ್ವಹಣೆಗೆ ಆದ್ಯತೆ: ಕರ್ನಾಟಕ–ಯುಕೆ ನಡುವೆ ಸಹಕಾರ ಬಲವರ್ಧನೆ
ಸುಸ್ಥಿರತೆ, ಘನತ್ಯಾಜ್ಯ ನಿರ್ವಹಣೆ ಮತ್ತು ತ್ಯಾಜ್ಯದಿಂದ ಆರ್ಥಿಕ ಮೌಲ್ಯ ಸೃಷ್ಟಿಗೆ ಆದ್ಯತೆ ನೀಡಲು ಕರ್ನಾಟಕ ಹಾಗೂ ಯುನೈಟೆಡ್ ಕಿಂಗ್ಡಮ್ನ ಯಾರ್ಕ್ ಮತ್ತು ನಾರ್ತ್ ಯಾರ್ಕ್ಷೈರ್ ಪ್ರದೇಶಗಳ ನಡುವೆ ಮುಂದಿನ ಮೂರು ವರ್ಷಗಳಲ್ಲಿ ಜಂಟಿ ನಾವೀನ್ಯತಾ ಕಾರ್ಯಕ್ರಮಗಳು ಮತ್ತು ಪ್ರಾಯೋಗಿಕ ಯೋಜನೆಗಳನ್ನು ರೂಪಿಸಲಾಗುವ
karnataka-uk-partnership-sustainability-waste-management-priyank-kharge


ಬೆಂಗಳೂರು, 20 ಅಕ್ಟೋಬರ್ (ಹಿ.ಸ.):

ಸುಸ್ಥಿರತೆ, ಘನತ್ಯಾಜ್ಯ ನಿರ್ವಹಣೆ ಹಾಗೂ ತ್ಯಾಜ್ಯದಿಂದ ಆರ್ಥಿಕ ಮೌಲ್ಯ ಸೃಷ್ಟಿಸುವ ಕ್ಷೇತ್ರಗಳಲ್ಲಿ ಕರ್ನಾಟಕ ಮತ್ತು ಯುನೈಟೆಡ್ ಕಿಂಗ್ಡಮ್ನ ಯಾರ್ಕ್ ಹಾಗೂ ನಾರ್ತ್ ಯಾರ್ಕ್ಷೈರ್ ಪ್ರದೇಶಗಳ ನಡುವಿನ ಸಹಕಾರವನ್ನು ಬಲಪಡಿಸಲು ಮುಂದಿನ ಮೂರು ವರ್ಷಗಳಲ್ಲಿ ಜಂಟಿ ನಾವೀನ್ಯತಾ ಕಾರ್ಯಕ್ರಮಗಳು, ಶ್ರೇಷ್ಠತಾ ಕೇಂದ್ರಗಳು ಮತ್ತು ಪ್ರಾಯೋಗಿಕ ಯೋಜನೆಗಳನ್ನು ರೂಪಿಸಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಯಾರ್ಕ್ ಮತ್ತು ನಾರ್ತ್ ಯಾರ್ಕ್ಷೈರ್ ಮೇಯರ್ ಡೇವಿಡ್ ಸ್ಕೈತ್ ಅವರೊಂದಿಗಿನ ಸಭೆಯ ಬಳಿಕ ಮಾತನಾಡಿದ ಅವರು, ಎರಡೂ ಪ್ರದೇಶಗಳ ಸಾಮರ್ಥ್ಯಗಳನ್ನು ಸಮನ್ವಯಗೊಳಿಸಿ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸರ್ಕಾರಗಳ ನಡುವಿನ ಸಹಭಾಗಿತ್ವದ ಮೂಲಕ ಸ್ಪಷ್ಟ ಮತ್ತು ಅಳೆಯಬಹುದಾದ ಫಲಿತಾಂಶಗಳನ್ನು ಸಾಧಿಸುವುದು ಉದ್ದೇಶವಾಗಿದೆ ಎಂದು ಹೇಳಿದರು.

ಕರ್ನಾಟಕದ ಗ್ಲೋಬಲ್ ಇನ್ನೋವೇಶನ್ ಅಲಯನ್ಸ್ ಈ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯಲು ಸೂಕ್ತ ವೇದಿಕೆಯಾಗಲಿದೆ. ಎರಡೂ ಕಡೆಯ ಆಸಕ್ತಿಯ ಕ್ಷೇತ್ರಗಳಲ್ಲಿ ಉತ್ತಮ ಹೊಂದಾಣಿಕೆಯಿದ್ದು, ಜಂಟಿ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಸಂಬಂಧಿತ ಸಂಸ್ಥೆಗಳನ್ನು ಗುರುತಿಸಿ, ಆದ್ಯತೆಯ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಯೋಜನೆಗಳನ್ನು ಶೀಘ್ರವಾಗಿ ಆರಂಭಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯುನಿವರ್ಸಿಟಿ ಆಫ್ ಯಾರ್ಕ್ ಜತೆ ಒಡಂಬಡಿಕೆ

ಸಭೆಯ ಬಳಿಕ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಯುನೈಟೆಡ್ ಕಿಂಗ್ಡಮ್ನ ಯುನಿವರ್ಸಿಟಿ ಆಫ್ ಯಾರ್ಕ್ನೊಂದಿಗೆ ಸಹಕಾರದ ಉದ್ದೇಶ ಪತ್ರಕ್ಕೆ (ಎಲ್ಒಐ) ಸಹಿ ಹಾಕಿತು.

ಈ ಒಡಂಬಡಿಕೆಯು ನಾವೀನ್ಯತೆ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ, ಉದ್ಯಮಶೀಲತೆ, ಸ್ಟಾರ್ಟ್ಅಪ್ಗಳಿಗೆ ಮಾರುಕಟ್ಟೆ ಪ್ರವೇಶ ಹಾಗೂ ಶೈಕ್ಷಣಿಕ ಮತ್ತು ಕೈಗಾರಿಕಾ ಸಂಸ್ಥೆಗಳ ನಡುವಿನ ಸಹಕಾರವನ್ನು ವಿಸ್ತರಿಸಲು ಚೌಕಟ್ಟನ್ನು ಒದಗಿಸಲಿದೆ. ಜೈವಿಕ ಆರ್ಥಿಕತೆ, ಸ್ವಚ್ಛ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಪ್ರಮುಖ ಸಹಕಾರದ ಕ್ಷೇತ್ರಗಳಾಗಿ ಗುರುತಿಸಲಾಗಿದೆ.

ಯಾರ್ಕ್ ಮತ್ತು ನಾರ್ತ್ ಯಾರ್ಕ್ಷೈರ್ ಪ್ರದೇಶಗಳು ಜೈವಿಕ ಆರ್ಥಿಕತೆ, ಕೈಗಾರಿಕಾ ಜೈವಿಕ ತಂತ್ರಜ್ಞಾನ, ಸುಸ್ಥಿರ ರಸಾಯನಶಾಸ್ತ್ರ, ಕೃಷಿ ನಾವೀನ್ಯತೆ ಮತ್ತು ಸ್ವಚ್ಛ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿವೆ. ಮತ್ತೊಂದೆಡೆ, ಕರ್ನಾಟಕವು ಜೈವಿಕ ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ, ಸ್ಟಾರ್ಟ್ಅಪ್ಗಳು ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಬಲವಾದ ನೆಲೆಯನ್ನು ಹೊಂದಿದೆ. ಈ ಸಾಮರ್ಥ್ಯಗಳನ್ನು ಪರಸ್ಪರ ಜೋಡಿಸುವ ಮೂಲಕ ಸಂಶೋಧನಾ ಫಲಿತಾಂಶಗಳನ್ನು ಪ್ರಾಯೋಗಿಕ ಪರಿಹಾರಗಳಾಗಿ ಹಾಗೂ ವಾಣಿಜ್ಯ ಅವಕಾಶಗಳಾಗಿ ಪರಿವರ್ತಿಸಬಹುದು ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಜಲ ಸಂಪನ್ಮೂಲ, ಸಾರಿಗೆ ಕ್ಷೇತ್ರಗಳಲ್ಲೂ ಸಹಕಾರ

ಸುಸ್ಥಿರತೆ ಮತ್ತು ತ್ಯಾಜ್ಯ ನಿರ್ವಹಣೆಯ ಜತೆಗೆ ಜಲ ಸಂಪನ್ಮೂಲ ನಿರ್ವಹಣೆ, ಸಾರಿಗೆ, ಭದ್ರತೆ ಹಾಗೂ ಪೊಲೀಸ್ ವ್ಯವಸ್ಥೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರದ ಸಾಧ್ಯತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಮುಂದಿನ ಹಂತದಲ್ಲಿ ಸೀಮಿತ ಸಂಖ್ಯೆಯ ಆದ್ಯತೆಯ ಕ್ಷೇತ್ರಗಳನ್ನು ಗುರುತಿಸಿ, ಒಡಂಬಡಿಕೆಯನ್ನು ಜಂಟಿ ಪ್ರಾಯೋಗಿಕ ಯೋಜನೆಗಳು, ಸಂಶೋಧನಾ ಸಹಯೋಗಗಳು, ಸ್ಟಾರ್ಟ್ಅಪ್ಗಳ ನಡುವಿನ ಸಂಪರ್ಕ ಮತ್ತು ತಂತ್ರಜ್ಞಾನಗಳ ವಾಣಿಜ್ಯೀಕರಣಕ್ಕೆ ಪೂರಕವಾದ ಕಾರ್ಯಚೌಕಟ್ಟಾಗಿ ರೂಪಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande