ಕಾರು ಮಕ್ಕಳ ಆಟಿಕೆಯಲ್ಲ:ಪೋಷಕರಿಗೆ ಹೈಕೋರ್ಟ್ ಎಚ್ಚರಿಕೆ
ಮೈಸೂರಿನಲ್ಲಿ 14 ವರ್ಷದ ಬಾಲಕ ಕಾರು ಚಲಾಯಿಸಿ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ಪ್ರಕರಣದಲ್ಲಿ, ಬಾಲಕನ ತಂದೆಯ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಕಾರು ಮಕ್ಕಳ ಆಟಿಕೆಯಲ್ಲ ಎಂದು ಎಚ್ಚರಿಸಿರುವ ನ್ಯಾಯಾಲಯ, ತಂದೆಯ ವಿರುದ್ಧದ ವಿಚಾರಣೆ ಮುಂದುವರಿಸಲು ಸೂಚಿಸಿದೆ.
karnataka-high-court-rejects-fathers-plea-minor-driving-crash-kills-three


ಬೆಂಗಳೂರು, 20 ಅಕ್ಟೋಬರ್ (ಹಿ.ಸ.):

ಮಕ್ಕಳ ಕೈಗೆ ಮೋಟಾರು ವಾಹನಗಳನ್ನು ನೀಡುವುದು ಆಟಿಕೆ ನೀಡಿದಂತಲ್ಲ, ಸಾರ್ವಜನಿಕ ರಸ್ತೆಗಳು ಆಟದ ಮೈದಾನಗಳಲ್ಲ ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಸಿದೆ.

ಮೈಸೂರಿನಲ್ಲಿ 14 ವರ್ಷದ ಬಾಲಕ ಕಾರು ಚಲಾಯಿಸಿ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಾಲಕನ ತಂದೆಯ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಅಲ್ಲದೆ, ತಂದೆಯ ವಿರುದ್ಧದ ಉದ್ದೇಶಪೂರ್ವಕವಲ್ಲದ ನರಹತ್ಯೆ ಆರೋಪದ ವಿಚಾರಣೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮಕ್ಕಳ ಅಪ್ರಾಪ್ತ ವಯಸ್ಸನ್ನು ಮುಂದಿಟ್ಟುಕೊಂಡು ಪೋಷಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

2020ರ ಡಿಸೆಂಬರ್ನಲ್ಲಿ ನಡೆದಿದ್ದ ದುರ್ಘಟನೆ

2020ರ ಡಿಸೆಂಬರ್ನಲ್ಲಿ ಹಳೆ ಬೆಂಗಳೂರು–ಮೈಸೂರು ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿತ್ತು. 14 ವರ್ಷದ ಬಾಲಕ ಚಲಾಯಿಸುತ್ತಿದ್ದ ವೋಕ್ಸ್ವ್ಯಾಗನ್ ವೆಂಟೋ ಕಾರು ಅಪಘಾತಕ್ಕೀಡಾದ ಪರಿಣಾಮ ದಂಪತಿ ಹಾಗೂ ಅವರ ಐದು ವರ್ಷದ ಮಗು ಮೃತಪಟ್ಟಿದ್ದರು.

ಈ ಪ್ರಕರಣದಲ್ಲಿ ಬಾಲಕನ ತಂದೆ ನದೀಮ್-ಉರ್-ರೆಹಮಾನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ತನ್ನ ಗಮನಕ್ಕೆ ಬಾರದಂತೆ ಮಗ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಅವರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಆದರೆ, ಅರ್ಜಿದಾರರ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ದೋಷಾರೋಪ ಪಟ್ಟಿಯ ಪ್ರಕಾರ, ತಂದೆಯೇ ಮಗನಿಗೆ ಕಾರಿನ ಕೀ ನೀಡಿದ್ದರು ಎಂಬ ಆರೋಪವಿದೆ. ಪೋಷಕರು ಸ್ವಯಂಪ್ರೇರಿತವಾಗಿ ಅಪ್ರಾಪ್ತರಿಗೆ ವಾಹನದ ಕೀಗಳನ್ನು ನೀಡಿದಾಗ ಸಂಭವಿಸುವ ದುರಂತಗಳಿಗೆ ಅವರ ಹೊಣೆಗಾರಿಕೆಯ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಹೊಣೆಗಾರಿಕೆ ವಿಚಾರಣೆ ವೇಳೆ ನಿರ್ಧಾರ

ವಾಹನದ ಕೀಗಳನ್ನು ಅಪ್ರಾಪ್ತರ ಕೈಗೆ ನೀಡಿದ ಸಂದರ್ಭದಲ್ಲಿ ಸಂಭವಿಸುವ ಅಪಘಾತಗಳಿಗೆ ಸಂಬಂಧಿಸಿದಂತೆ ಪೋಷಕರ ಹೊಣೆಗಾರಿಕೆ ಏನು ಎಂಬುದು ವಿಚಾರಣೆಯಲ್ಲಿ ನಿರ್ಧಾರವಾಗಲಿದೆ ಎಂದು ನ್ಯಾಯಾಲಯ ತಿಳಿಸಿದೆ. ಇದು ಕೇವಲ ನಿರ್ಲಕ್ಷ್ಯದ ಪ್ರಕರಣವೇ ಅಥವಾ ಕಾನೂನಿನಡಿ ಗಂಭೀರ ಹೊಣೆಗಾರಿಕೆಗೆ ಒಳಪಡುವ ಕೃತ್ಯವೇ ಎಂಬುದನ್ನು ವಿಚಾರಣೆಯ ಸಂದರ್ಭದಲ್ಲಿ ಪರಿಶೀಲಿಸಬೇಕಿದೆ ಎಂದು ಸ್ಪಷ್ಟಪಡಿಸಿದೆ.

ಅಪ್ರಾಪ್ತರಿಂದ 751 ಅಪಘಾತ: ಕೋರ್ಟ್ ಕಳವಳ

ರಾಜ್ಯದಲ್ಲಿ ಅಪ್ರಾಪ್ತರು ವಾಹನ ಚಲಾಯಿಸುವುದರಿಂದ ಸಂಭವಿಸುತ್ತಿರುವ ಅಪಘಾತಗಳ ಕುರಿತು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. 2025–26ರಲ್ಲಿ ಕರ್ನಾಟಕದಲ್ಲಿ ಅಪ್ರಾಪ್ತರು ವಾಹನ ಚಲಾಯಿಸಿದ ಕಾರಣದಿಂದ 751 ಅಪಘಾತಗಳು ಸಂಭವಿಸಿರುವುದಾಗಿ ಉಲ್ಲೇಖಿಸಿದೆ.

ಅಪ್ರಾಪ್ತರಿಗೆ ವಾಹನ ಚಲಾಯಿಸಲು ಅವಕಾಶ ನೀಡುವ ಪೋಷಕರು ಅದರ ಪರಿಣಾಮಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶವನ್ನು ಈ ಆದೇಶ ರವಾನಿಸಿದೆ. ಮಕ್ಕಳ ಸುರಕ್ಷತೆಯಷ್ಟೇ ಅಲ್ಲದೆ, ಸಾರ್ವಜನಿಕರ ಜೀವದ ಸುರಕ್ಷತೆಯೂ ಪೋಷಕರ ಜವಾಬ್ದಾರಿಯ ಭಾಗವಾಗಿದೆ ಎಂಬುದನ್ನು ನ್ಯಾಯಾಲಯದ ಅಭಿಪ್ರಾಯ ಒತ್ತಿಹೇಳಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande