
ಬೆಂಗಳೂರು,16 ಅಕ್ಟೋಬರ್ (ಹಿ.ಸ.):
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆ ಜಾಲವನ್ನು ಪತ್ತೆಹಚ್ಚಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು, ಸುಮಾರು ₹2.75 ಕೋಟಿ ಮೌಲ್ಯದ 2.75 ಕೆ.ಜಿ. ಚಿನ್ನವನ್ನು ಜಪ್ತಿ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶ್ರೀಲಂಕಾ ಪ್ರಜೆಗಳು ಹಾಗೂ ವಿಮಾನ ನಿಲ್ದಾಣದ ಸಿಬ್ಬಂದಿ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ.
ಸಿಂಗಾಪುರದಿಂದ ಬೆಂಗಳೂರು ಮಾರ್ಗವಾಗಿ ದುಬೈಗೆ ತೆರಳಲು ಬಂದಿದ್ದ ಮೊಹಮ್ಮದ್ ಅಖಿಲ್ ಮತ್ತು ದುಬೈನಿಂದ ಬೆಂಗಳೂರು ಮಾರ್ಗವಾಗಿ ಮಾಲ್ಡೀವ್ಸ್ಗೆ ಪ್ರಯಾಣಿಸುತ್ತಿದ್ದ ಮೊಹಮ್ಮದ್ ನಾಸಿರ್ ಬಂಧಿತ ಪ್ರಯಾಣಿಕರು ಎಂದು ಗುರುತಿಸಲಾಗಿದೆ.
ಇಬ್ಬರೂ ಶ್ರೀಲಂಕಾ ಪ್ರಜೆಗಳಾಗಿದ್ದು, ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ಹಸ್ತಾಂತರಿಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ವಿಮಾನ ನಿಲ್ದಾಣದ ಟ್ರಾವೆಲ್ ಫುಡ್ ಸರ್ವಿಸಸ್ (ಟಿಎಫ್ಎಸ್) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಬಿನ್ ಜೋಸ್ ಎಂಬ ಸಿಬ್ಬಂದಿಗೆ ಚಿನ್ನವನ್ನು ಹಸ್ತಾಂತರಿಸಲು ಯೋಜಿಸಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆದರೆ, ಚಿನ್ನದ ಹಸ್ತಾಂತರಕ್ಕೂ ಮುನ್ನ ಕಾರ್ಯಾಚರಣೆ ನಡೆಸಿದ ಡಿಆರ್ಐ ಅಧಿಕಾರಿಗಳು ಮೂವರನ್ನೂ ವಶಕ್ಕೆ ಪಡೆದು ಬಂಧಿಸಿದ್ದಾರೆ.
ಕಳ್ಳಸಾಗಣೆ ಜಾಲದ ಕುರಿತು ತನಿಖೆ
ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಚಿನ್ನ ಸಾಗಣೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಗಳ ಪಾತ್ರ, ಚಿನ್ನದ ಮೂಲ ಹಾಗೂ ಇದರ ಹಿಂದೆ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂಬ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R