
ಬೆಂಗಳೂರು, 16 ಅಕ್ಟೋಬರ್ (ಹಿ.ಸ.):
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಎಲ್ಆರ್) ಮತ್ತು ಕೆನಡಾದ ವ್ಯಾಂಕೋವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ವೈವಿಆರ್) ನಡುವೆ ‘ಸಿಸ್ಟರ್ ಏರ್ಪೋರ್ಟ್’ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಒಪ್ಪಂದವು ದಕ್ಷಿಣ ಭಾರತ ಮತ್ತು ಪಶ್ಚಿಮ ಕೆನಡಾ ನಡುವಿನ ವಿಮಾನಯಾನ ಸಂಪರ್ಕ, ವ್ಯಾಪಾರ, ತಂತ್ರಜ್ಞಾನ ಹಾಗೂ ಸರಕು ಸಾಗಣೆ ವಹಿವಾಟು ವೃದ್ಧಿಗೆ ನೆರವಾಗುವ ನಿರೀಕ್ಷೆಯಿದೆ. ಬೆಂಗಳೂರು–ವ್ಯಾಂಕೋವರ್ ನಡುವೆ ನೇರ ವಿಮಾನ ಸೇವೆ ಆರಂಭಿಸುವ ನಿಟ್ಟಿನಲ್ಲಿಯೂ ಈ ಒಪ್ಪಂದ ಮಹತ್ವದ ಹೆಜ್ಜೆಯಾಗಿದೆ.
ಬೆಂಗಳೂರಿನ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆನಡಾದ ಅಂತಾರಾಷ್ಟ್ರೀಯ ವ್ಯಾಪಾರ ಸಚಿವ ಮಣಿಂದರ್ ಸಿಧು, ಭಾರತದಲ್ಲಿನ ಕೆನಡಾದ ಹೈಕಮಿಷನರ್ ಕ್ರಿಸ್ ಕೂಟರ್, ಕಾನ್ಸುಲ್ ಜನರಲ್ ರಿಯಾನ್ ವಾರ್ಡ್ ಸೇರಿದಂತೆ ಎರಡೂ ವಿಮಾನ ನಿಲ್ದಾಣಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಏಳು ಕ್ಷೇತ್ರಗಳಲ್ಲಿ ಸಹಕಾರ
ಒಪ್ಪಂದದಡಿ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯ ಸುಧಾರಣೆ, ತಂತ್ರಜ್ಞಾನ ವಿನಿಮಯ, ನವೀನ ಆವಿಷ್ಕಾರಗಳು, ಡಿಜಿಟಲ್ ಟ್ವಿನ್ ತಂತ್ರಜ್ಞಾನದ ಬಳಕೆ ಸೇರಿದಂತೆ ಏಳು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಆದ್ಯತೆ ನೀಡಲಾಗಿದೆ.
ಸ್ಮಾರ್ಟ್ ಏರ್ಪೋರ್ಟ್ ತಂತ್ರಜ್ಞಾನ ಅಳವಡಿಕೆ, ಸುಸ್ಥಿರ ಕಾರ್ಯಾಚರಣೆ ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವುದು ಇದರ ಪ್ರಮುಖ ಉದ್ದೇಶಗಳಾಗಿವೆ.
ಬೆಂಗಳೂರು ಮತ್ತು ವ್ಯಾಂಕೋವರ್ ನಡುವೆ ನೇರ ವಿಮಾನ ಸಂಪರ್ಕಕ್ಕೆ ಪೂರಕ ವಾತಾವರಣ ನಿರ್ಮಿಸುವುದರ ಜತೆಗೆ, ಉಭಯ ಪ್ರದೇಶಗಳ ಉದ್ಯಮಗಳಿಗೆ ಅನುಕೂಲವಾಗುವಂತೆ ಸರಕು ಸಾಗಣೆ ಹಾಗೂ ವ್ಯಾಪಾರ ವಹಿವಾಟು ಹೆಚ್ಚಿಸುವ ಗುರಿಯನ್ನೂ ಹೊಂದಲಾಗಿದೆ.
ವ್ಯಾಪಾರ ಸಂಬಂಧ ವೃದ್ಧಿಗೆ ಒತ್ತು
ಈ ಕುರಿತು ಮಾತನಾಡಿದ ಕೆನಡಾದ ಅಂತರರಾಷ್ಟ್ರೀಯ ವ್ಯಾಪಾರ ಸಚಿವ ಮಣಿಂದರ್ ಸಿಧು, “ಭಾರತದಂತಹ ಮಿತ್ರ ರಾಷ್ಟ್ರಗಳೊಂದಿಗೆ ಕೆನಡಾದ ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುವ ಪ್ರಯತ್ನಗಳು ಉತ್ತಮ ಫಲಿತಾಂಶ ನೀಡುತ್ತಿವೆ” ಎಂದು ಹೇಳಿದರು.
ಬೆಂಗಳೂರು ಮತ್ತು ವ್ಯಾಂಕೋವರ್ ನಡುವಿನ ಈ ಪಾಲುದಾರಿಕೆಯು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳ ನಡುವೆ ನೇರ ಸಂಪರ್ಕಕ್ಕೆ ಅವಕಾಶ ಕಲ್ಪಿಸಲಿದ್ದು, ಭವಿಷ್ಯದಲ್ಲಿ ಹೂಡಿಕೆ ಹಾಗೂ ವ್ಯಾಪಾರ ವೃದ್ಧಿಗೆ ನೆರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಐಎಎಲ್) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ನಾಯರ್ ಮಾತನಾಡಿ, “ಈ ಕಾರ್ಯತಂತ್ರದ ಪಾಲುದಾರಿಕೆಯು ತಂತ್ರಜ್ಞಾನ ಏಕೀಕರಣಕ್ಕೆ ಭದ್ರ ಚೌಕಟ್ಟನ್ನು ಒದಗಿಸಲಿದೆ.
ಸ್ಮಾರ್ಟ್ ಏರ್ಪೋರ್ಟ್ ತಂತ್ರಜ್ಞಾನ, ಸುಸ್ಥಿರ ಕಾರ್ಯಾಚರಣೆ ಮತ್ತು ಪ್ರಯಾಣಿಕರಿಗೆ ಜಾಗತಿಕ ಮಟ್ಟದ ಅನುಭವ ನೀಡುವ ನಿಟ್ಟಿನಲ್ಲಿ ಎರಡೂ ವಿಮಾನ ನಿಲ್ದಾಣಗಳು ಒಟ್ಟಾಗಿ ಕಾರ್ಯನಿರ್ವಹಿಸಲಿವೆ” ಎಂದು ತಿಳಿಸಿದರು.
10.9 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ
2025ರಲ್ಲಿ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ವ್ಯಾಪಾರ 10.9 ಬಿಲಿಯನ್ ಡಾಲರ್ ತಲುಪಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಐದು ಲಕ್ಷಕ್ಕೂ ಅಧಿಕ ಭಾರತೀಯರು ವಾಸಿಸುತ್ತಿದ್ದು, ಅಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಅವರ ಪಾಲು ಸುಮಾರು ಶೇ.10ರಷ್ಟಿದೆ.
ಬೆಂಗಳೂರು ಜಾಗತಿಕ ತಂತ್ರಜ್ಞಾನ ಮತ್ತು ಉದ್ಯಮಗಳ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಈ ಒಪ್ಪಂದವು ಉಭಯ ದೇಶಗಳ ನಡುವಿನ ಆರ್ಥಿಕ ಹಾಗೂ ಜನಸಂಪರ್ಕದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.
ಪ್ರಯಾಣಿಕರ ಸಂಚಾರ, ಸರಕು ಸಾಗಣೆಯಲ್ಲಿ ಪ್ರಗತಿ
2025ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ 4.44 ಕೋಟಿ ಪ್ರಯಾಣಿಕರು ಸಂಚರಿಸಿದ್ದು, 5.32 ಲಕ್ಷ ಟನ್ ಸರಕು ಸಾಗಣೆ ನಡೆದಿದೆ. ಟರ್ಮಿನಲ್-2 ಜಾಗತಿಕ ವಿಮಾನ ನಿಲ್ದಾಣ ಮೌಲ್ಯಮಾಪನ ಸಂಸ್ಥೆ ಸ್ಕೈಟ್ರಾಕ್ಸ್ನಿಂದ ಪಂಚತಾರಾ ರೇಟಿಂಗ್ ಪಡೆದಿರುವುದು ಗಮನಾರ್ಹವಾಗಿದೆ.
ಇದೇ ಅವಧಿಯಲ್ಲಿ ವ್ಯಾಂಕೋವರ್ ವಿಮಾನ ನಿಲ್ದಾಣದ ಮೂಲಕ 2.69 ಕೋಟಿ ಪ್ರಯಾಣಿಕರು ಸಂಚರಿಸಿದ್ದು, 3.65 ಲಕ್ಷ ಟನ್ ಸರಕು ಸಾಗಣೆ ನಡೆದಿದೆ.
ಉತ್ತರ ಅಮೆರಿಕದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ವ್ಯಾಂಕೋವರ್ ವಿಮಾನ ನಿಲ್ದಾಣವು ಸತತ 15 ವರ್ಷಗಳಿಂದ ಉತ್ತರ ಅಮೆರಿಕದ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಗೌರವ ಪಡೆದಿದೆ.
ಎರಡೂ ವಿಮಾನ ನಿಲ್ದಾಣಗಳ ನಡುವಿನ ಈ ಪಾಲುದಾರಿಕೆಯು ಕಾರ್ಯಾಚರಣೆಯ ಗುಣಮಟ್ಟ ಸುಧಾರಿಸುವುದರ ಜತೆಗೆ, ಭವಿಷ್ಯದಲ್ಲಿ ನೇರ ವಿಮಾನ ಸಂಪರ್ಕಕ್ಕೆ ಅವಕಾಶ ವಿಸ್ತರಿಸಲು ಮತ್ತು ಭಾರತ–ಕೆನಡಾ ನಡುವಿನ ವ್ಯಾಪಾರ, ಪ್ರವಾಸೋದ್ಯಮ ಹಾಗೂ ಉದ್ಯಮ ಸಂಬಂಧಗಳಿಗೆ ಉತ್ತೇಜನ ನೀಡಲು ನೆರವಾಗುವ ನಿರೀಕ್ಷೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R