
ಮಂಡ್ಯ, 15 ಅಕ್ಟೋಬರ್ (ಹಿ.ಸ.):
ಪಾರಂಪರಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಗುರುವಾರ ಚಾಲನೆ ದೊರೆಯಲಿದೆ. ನಟ ಹಾಗೂ ನಿರ್ದೇಶಕ ವಿ. ರವಿಚಂದ್ರನ್ ಅವರು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ ಮನೆ ಮಾಡಲಿದೆ.
ಮಧ್ಯಾಹ್ನ 3ರಿಂದ 3.45ರ ನಡುವಿನ ಶುಭ ಕುಂಭ ಲಗ್ನದಲ್ಲಿ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಶ್ರೀರಂಗಪಟ್ಟಣದ ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಬನ್ನಿ ಪೂಜೆಯ ಮೂಲಕ ದಸರಾ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ಬಳಿಕ ಅಂಬಾರಿ ಹೊತ್ತ ಮಹೇಂದ್ರ ಆನೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು, ಶ್ರೀರಂಗಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಸಾಗಲಿದೆ.
ದಸರಾ ಮಹೋತ್ಸವದ ಅಂಗವಾಗಿ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ. ಶ್ರೀರಂಗನಾಥಸ್ವಾಮಿ ದೇವಾಲಯದ ಸಮೀಪ ನಿರ್ಮಿಸಿರುವ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.