
ಕೋಲಾರ, 14 ಅಕ್ಟೋಬರ್ (ಹಿ.ಸ) :
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ, ಆತನ ಸಾವಿಗೆ ಕಾರಣರಾದ ಐವರು ಆರೋಪಿಗಳನ್ನು ಕೆಜಿಎಫ್ ತಾಲ್ಲೂಕು ಆಂಡರ್ಸನ್ಪೇಟೆ ಪೊಲೀಸರು ಬಂಧಿಸಿದ್ದಾರೆ.
ಸ್ಯಾಮ್ಸನ್ ಅಲಿಯಾಸ್ ಮೊಟ್ಟೆ ೨೦ ವರ್ಷ, ಅವಿನಾಶ್ರಾಜ್ ಅಲಿಯಾಸ್ ಅವಿನಾಶ್ ೨೮ ವರ್ಷ, ಗ್ಲಾಡ್ವಿನ್ ಅಲಿಯಾಸ್ ಗ್ಲಾಡ್ ೨೭ ವರ್ಷ, ಗಾಡ್ವಿನ್ ಬೆನೆಡಿಕ್ಟ್ ಅಲಿಯಾಸ್ ಗುಡ್ವಿನ್ ೨೨ ವರ್ಷ ಮತ್ತು ವಿಟ್ರೀಸ್ ಲಿಯಾಂಡರ್ ಅಲಿಯಾಸ್ ಪೆಟ್ರೀಸ್ ೨೩ ವರ್ಷ ಬಂಧಿತ ಆರೋಪಿಗಳು.
ಸಂತ್ರಸ್ತ ಮರಿಯ ಗಾಡ್ವಿನ್ ಹುಟ್ಟಿನಿಂದಲೇ ಹಿಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿದ್ದರು. ಸೆಪ್ಟೆಂಬರ್ ೨೯ ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಅವರು ರಾಬರ್ಟ್ಸನ್ಪೇಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಈ ವೇಳೆ ಹಳೆಯ ದ್ವೇಷ ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿಗಳು ಮರಿಯ ಗಾಡ್ವಿನ್ ಅವರನ್ನು ದ್ವಿಚಕ್ರ ವಾಹನಗಳಲ್ಲಿ ಬಲವಂತವಾಗಿ ಚಾಂಪಿಯನ್ ರೀಫ್ಸ್ ಬಿ ಬ್ಲಾಕ್ನ ಮೋಹನ್ ಸಿಮೆಟ್ರಿ ಬಳಿಗೆ ಕರೆದುಕೊಂಡು ಹೋದರು.
ಅಲ್ಲಿ ಎಲ್ಲರೂ ಸೇರಿ ಆತನಿಗೆ ತೀವ್ರ ತರವಾದ ಹಿಂಸೆ ನೀಡಿ, ಬಲವಂತವಾಗಿ ಡ್ಯಾನ್ಸ್ ಮಾಡಿಸಿ, ಕೋಲಿನಿಂದ ಸತತವಾಗಿ ಹೊಡೆದು ಹಲ್ಲೆ ನಡೆಸಿದರು. ಈ ಘಟನೆಯಿಂದ ತೀವ್ರ ಅಸ್ವಸ್ಥಗೊಂಡ ಮರಿಯ ಗಾಡ್ವಿನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರಾಜೀವ್ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ ೧೦ ರಂದು ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತನ ಚಿಕ್ಕಪ್ಪ ಆರೋಗ್ಯದಾಸ್ ಅವರು ನೀಡಿದ ದೂರಿನನ್ವಯ ಆಂಡರ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೊಂಡ ಆಂಡರ್ಸನ್ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಹೊನ್ನೆಗೌಡ ಹೆಚ್.ಎಂ. ಹಾಗೂ ಅವರ ಸಿಬ್ಬಂದಿ ಅಕ್ಟೋಬರ್ ೦೯ ರಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಐವರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಡಿ.ವೈ.ಎಸ್.ಪಿ ಲಕ್ಷ್ಮಯ್ಯ ವಿ. ಹಾಗೂ ರಾಬರ್ಟ್ಸನ್ಪೇಟೆ ವೃತ್ತ ಕಛೇರಿಯ ಸಿ.ಪಿ.ಐ ಅನಿಲ್ ಕುಮಾರ್ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪಿ.ಎಸ್.ಐ ಹೊನ್ನೆಗೌಡ ಹೆಚ್.ಎಂ. ಮತ್ತು ಸಿಬ್ಬಂದಿಯವರಾದ ವೇಣುಗೋಪಾಲ್, ಗಜೇಂದ್ರ, ರಘು, ಲೋಕೇಶ್ ಹಾಗೂ ಮುರಳಿ ಅವರ ಸಮಯೋಚಿತ ಕಾರ್ಯವನ್ನು ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವಾಂಶು ರಾಜಪೂತ್ ಶ್ಲಾಘಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್