
ಕೋಲಾರ,14 ಅಕ್ಟೋಬರ್ (ಹಿ.ಸ) : ಮಾಲೂರು ತಾಲ್ಲೂಕಿನ ಲಕ್ಕೂರು ಹೋಬಳಿಯ ಬಂಟಹಳ್ಳಿ ಗ್ರಾಮದಲ್ಲಿ ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿ ಅಕ್ರಮವಾಗಿ ನಿರ್ಮಿಸಲಾಗುತ್ತಿರುವ ಬಾರ್ ಮತ್ತು ರೆಸ್ಟೋರೆಂಟ್ಗೆ ಲೈಸೆನ್ಸ್ ನೀಡಬಾರದು ಹಾಗೂ ನಿರ್ಮಾಣ ಕಾರ್ಯವನ್ನು ತಕ್ಷಣವೇ ತಡೆಯಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ಕೋಲಾರ ಜಿಲ್ಲಾ ಶಾಖೆ ಅಬಕಾರಿ ಇಲಾಖೆಯ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ನಗರದ ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕಿ ಸುಮ ರವರ ಮೂಲಕ ಉಪ ಆಯುಕ್ತರಿಗೆ ದಸಂಸ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಬಂಟಹಳ್ಳಿ ಗ್ರಾಮವು ತಮಿಳುನಾಡು ಗಡಿಗೆ ಹೊಂದಿಕೊಂಡಿದ್ದು, ಇಲ್ಲಿ ಶೇಕಡಾ ೫೦ಕ್ಕೂ ಹೆಚ್ಚು ದಲಿತ ಸಮುದಾಯ ಮತ್ತು ಕೂಲಿ ಕಾರ್ಮಿಕರ ಕುಟುಂಬಗಳು ವಾಸಿಸುತ್ತಿವೆ. ಗ್ರಾಮದಲ್ಲಿ ಈಗಾಗಲೇ ಒಂದು ಬಾರ್ ಸಕ್ರಿಯವಾಗಿದ್ದು, ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟಾಗಿದೆ. ಹೀಗಿರುವಾಗ, ಸರ್ವೇ ನಂಬರ್ ೧೩೨/೫ ರ ಕೃಷಿ ಜಮೀನಿನಲ್ಲಿ ಯಾವುದೇ ಅಧಿಕೃತ ಅನುಮತಿಯಿಲ್ಲದೆ ಮತ್ತೊಂದು ಬಾರ್ & ರೆಸ್ಟೋರೆಂಟ್ ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಈ ಅಕ್ರಮ ನಿರ್ಮಾಣದ ವಿರುದ್ಧ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳು ಕೆಲಸ ಸ್ಥಗಿತಗೊಳಿಸುವಂತೆ ನೋಟಿಸ್ ನೀಡಿದ್ದರೂ, ಅದನ್ನು ಉಲ್ಲಂಘಿಸಿ ರಾತ್ರೋರಾತ್ರಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಅಲ್ಲದೆ, ಡಿ.ಎನ್. ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ತಪ್ಪಿಸಿ ಎನ್.ಒ.ಸಿ ಹಾಗೂ ಜನರಲ್ ಲೈಸೆನ್ಸ್ ಪಡೆದು ಅಬಕಾರಿ ಇಲಾಖೆಗೆ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಡಿಎಸ್ಎಸ್ ಆರೋಪಿಸಿದೆ.
ಈ ಅಕ್ರಮದ ವಿರುದ್ಧ ಗ್ರಾಮಸ್ಥರು ಮಾಲೂರು ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯವು ಸದರಿ ಕಟ್ಟಡದಲ್ಲಿ ಯಾವುದೇ ವಾಣಿಜ್ಯ ವ್ಯವಹಾರಗಳನ್ನು ನಡೆಸಬಾರದೆಂದು ಸ್ಪಷ್ಟವಾದ ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆಯ ಪ್ರತಿಯನ್ನು ಈಗಾಗಲೇ ಅಬಕಾರಿ ಇಲಾಖೆಗೆ ತಲುಪಿಸಲಾಗಿದೆ. ಅಲ್ಲದೆ, ಮಾಲೂರು ಪೊಲೀಸ್ ಇನ್ಸ್ಪೆಕ್ಟರ್ ಅವರು ಸಹ ಸಾರ್ವಜನಿಕ ಹಿತದೃಷ್ಟಿ ಮತ್ತು ಕಾನೂನು ಸುವ್ಯವಸ್ಥೆಯ ಕಾರಣದಿಂದ ಈ ಲೈಸೆನ್ಸ್ ಅರ್ಜಿಯನ್ನು ಗಂಭೀರವಾಗಿ ಪರಿಶೀಲಿಸಬೇಕೆಂದು ಅಬಕಾರಿ ಇಲಾಖೆಗೆ ವರದಿ ನೀಡಿರುತ್ತಾರೆ.
ನ್ಯಾಯಾಲಯದ ಆದೇಶಕ್ಕೆ ಗೌರವ ನೀಡಿ, ಬಂಟಹಳ್ಳಿ ಗ್ರಾಮದ ದಲಿತರ, ಬಡಜನರ ಮತ್ತು ಕೂಲಿಕಾರ್ಮಿಕರ ಶ್ರೇಯೋಭಿವೃದ್ಧಿಯ ಹಿತದೃಷ್ಟಿಯಿಂದ ಈ ಬಾರ್ ಯಾವುದೇ ಕಾರಣಕ್ಕೂ ಲೈಸೆನ್ಸ್ ನೀಡಬಾರದು ಮತ್ತು ತಕ್ಷಣವೇ ಕಾಮಗಾರಿ ಹಾಗೂ ಚಟುವಟಿಕೆಗಳನ್ನು ತಡೆಯಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಸಂಘಟನಾ ಸಂಚಾಲಕ ಹೂವರಸನಹಳ್ಳಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್,ದೊಡ್ಡಿ ಮುನಿಯಪ್ಪ, ಬೀರಮಾನಹಳ್ಳಿ ಆಂಜಿನಪ್ಪ, ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಮಂಜುಳಾ ನಾಗರಾಜ್, ಸಂಘಟನಾ ಸಂಚಾಲಕಿ ಲಕ್ಷ್ಮಮ್ಮ, ತಾಲ್ಲೂಕು ಸಂಚಾಲಕ ಮಲ್ಲಸಂದ್ರ ವೆಂಕಟಸ್ವಾಮಿ, ಸಂಘಟನಾ ಸಂಚಾಲಕ ಅಬ್ಬಿಣಿ ನಾಗರಾಜ್, ಸೀಸಂದ್ರ ಚೌಡಪ್ಪ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್