ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ
ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಹಾಗೂ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
Hunasamaranahalli-Mutt-Nanjeshwara-Shivacharya-Swamiji-Arrested-Rape-Case


ಬೆಂಗಳೂರು, 12 ಅಕ್ಟೋಬರ್ (ಹಿ.ಸ.):

ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಹಾಗೂ ವಂಚಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಹುಣಸಮಾರನಹಳ್ಳಿ ಮಠದ ದಯಾನಂದ ಅಲಿಯಾಸ್ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಯುವತಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಈಶಾನ್ಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ವಾಮೀಜಿಯನ್ನು ಪೊಲೀಸ್ ಠಾಣೆಗೆ ಕರೆತಂದಿದ್ದು, ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ಮಠದ ಸ್ವಾಮೀಜಿ ವಿರುದ್ಧ ಈ ಹಿಂದೆಯೂ ಆರೋಪ:ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಈ ಹಿಂದೆಯೂ ಮಹಿಳೆಯರೊಂದಿಗಿನ ಸಂಬಂಧಕ್ಕೆ ಸಂಬಂಧಿಸಿದ ಆರೋಪಗಳು ಕೇಳಿಬಂದಿದ್ದವು.

2017ರ ಅಕ್ಟೋಬರ್ನಲ್ಲಿಯೂ ಇಂತಹ ಆರೋಪಗಳು ಮುನ್ನೆಲೆಗೆ ಬಂದಿದ್ದವು ಎನ್ನಲಾಗಿದ್ದು, ಆ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಭಕ್ತರು ಮಠದ ಮುಂದೆ ಪ್ರತಿಭಟನೆ ನಡೆಸಿ ಸ್ವಾಮೀಜಿಯನ್ನು ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿದ್ದರು.

ಅಪಾರ ಆಸ್ತಿ ಹೊಂದಿರುವ ಮಠಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಹುಣಸಮಾರನಹಳ್ಳಿ ಮಠವು ವೀರಶೈವ ಲಿಂಗಾಯತ ಸಮುದಾಯದ ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಮಠದ ಶಾಖಾ ಮಠವಾಗಿದೆ ಎಂದು ಹೇಳಲಾಗುತ್ತದೆ.

ಮಠವು ಅಪಾರ ಪ್ರಮಾಣದ ಜಮೀನು ಹಾಗೂ ಆಸ್ತಿ ಹೊಂದಿದ್ದು, ಅದರ ಆಸ್ತಿ-ಪಾಸ್ತಿಗೆ ಸಂಬಂಧಿಸಿದ ವಿಚಾರಗಳು ಈ ಹಿಂದೆಯೂ ಚರ್ಚೆಗೆ ಗ್ರಾಸವಾಗಿದ್ದವು.ಸದ್ಯ ಯುವತಿ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಸ್ವಾಮೀಜಿ ವಿರುದ್ಧ ಕೇಳಿಬಂದಿರುವ ಆರೋಪಗಳು ತನಿಖೆಯಿಂದ ದೃಢಪಡಬೇಕಿದ್ದು, ಈ ಸಂಬಂಧ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande