
ಬೆಂಗಳೂರು, 10 ಅಕ್ಟೋಬರ್ (ಹಿ.ಸ.):
ನಗರದ ರಾಗಿಗುಡ್ಡ–ಕನಕಪುರ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಯೋಜನೆಗೆ ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಯೋಜನೆ ಕೈಬಿಡುವಂತೆ ಒತ್ತಾಯಿಸಿ ಅಕ್ಟೋಬರ್ 11ರಂದು ಮಾನವ ಸರಪಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ನಗರದ ರೋಸ್ ಗಾರ್ಡನ್ ಪಕ್ಕದಲ್ಲಿ ಬೆಳಿಗ್ಗೆ 11 ಗಂಟೆಗೆ ಶಾಂತಿಯುತ ಪ್ರತಿಭಟನೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರತಿಭಟನೆಯ ಸಂದರ್ಭದಲ್ಲಿ ಯಾವುದೇ ಗಲಾಟೆ ನಡೆಸದೆ, ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಹೋರಾಟ ನಡೆಸಲು ನಿರ್ಧರಿಸಲಾಗಿದೆ.
ಮೆಟ್ರೋಗೆ ಸಮಾನಾಂತರ ಕಾರಿಡಾರ್ ಬೇಡಪ್ರಸ್ತಾವಿತ ಎಲಿವೇಟೆಡ್ ಕಾರಿಡಾರ್ ನಮ್ಮ ಮೆಟ್ರೊ ಹಸಿರು ಮಾರ್ಗಕ್ಕೆ ಸಮಾನಾಂತರವಾಗಿ ನಿರ್ಮಾಣವಾಗುವುದರಿಂದ, ಈ ಯೋಜನೆಯ ಬದಲಿಗೆ ಈಗಿರುವ ಮೆಟ್ರೊ ಸೇವೆಯ ಆವರ್ತನ ಹೆಚ್ಚಿಸುವುದು,ಪಾರ್ಕಿಂಗ್ ವ್ಯವಸ್ಥೆ ಸುಧಾರಿಸುವುದು ಹಾಗೂ ಕೊನೆಯ ಹಂತದ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.
ಜನವಸತಿ ಪ್ರದೇಶಗಳಲ್ಲಿ ಬೃಹತ್ ಮೇಲ್ಸೇತುವೆ ನಿರ್ಮಾಣದಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಕಾವೇರಿ ಕುಡಿಯುವ ನೀರಿನ ಪೈಪ್ಲೈನ್ಗೆ ಹಾನಿಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಪೈಪ್ಲೈನ್ ಮೇಲಿನ ನಿರ್ಮಾಣಗಳಿಗೆ ಸಂಬಂಧಿಸಿದ ಕಾನೂನು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.
18.5 ಕಿ.ಮೀ. ಉದ್ದದ ಕಾರಿಡಾರ್ಯೋಜನೆಯು ಮಾರೇನಹಳ್ಳಿ ಮುಖ್ಯ ರಸ್ತೆಯ ರಾಗಿಗುಡ್ಡ ಜಂಕ್ಷನ್ನಿಂದ ಆರಂಭವಾಗಿ, ಬಿಡಬ್ಲ್ಯುಎಸ್ಎಸ್ಬಿ ಪೈಪ್ಲೈನ್ ರಸ್ತೆ ಹಾಗೂ ತಲಘಟ್ಟಪುರ ಜಂಕ್ಷನ್ ಮೂಲಕ ಕನಕಪುರ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಉದ್ದೇಶ ಹೊಂದಿದೆ.
ಸುಮಾರು 18.5 ಕಿ.ಮೀ. ಉದ್ದದ ಈ ಕಾರಿಡಾರ್ ನೈಸ್ ರಸ್ತೆ ಸಂಪರ್ಕಕ್ಕೂ ನೆರವಾಗುವಂತೆ ರೂಪಿಸಲಾಗಿದೆ.
ಈ ಯೋಜನೆಯಿಂದ ವಾಹನ ಸವಾರರಿಗೆ ಸಂಚಾರದ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಿದ್ದರೂ, ಸಾರ್ವಜನಿಕ ಸಾರಿಗೆ ಸುಧಾರಣೆ, ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ನಿವಾಸಿಗಳ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಯೋಜನೆಯ ಕುರಿತು ಸಾರ್ವಜನಿಕರ ಆತಂಕಗಳನ್ನು ಪರಿಗಣಿಸಿ, ಪರ್ಯಾಯ ಸಾರಿಗೆ ವ್ಯವಸ್ಥೆಗಳ ಸಾಧ್ಯತೆಯನ್ನು ಪರಿಶೀಲಿಸಬೇಕು ಹಾಗೂ ಸ್ಥಳೀಯರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂಬುದು ಅವರ ಒತ್ತಾಯವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R