ಹಾಡಿ ಜನರ ಸಮಸ್ಯೆ ಪರಿಹಾರಕ್ಕೆ ವಿಶೇಷ ಪ್ರಜಾಸೇವೆ ಅಭಿಯಾನ: ಸಚಿವ ರಘುಮೂರ್ತಿ
ಚಾಮರಾಜನಗರ, 10 ಅಕ್ಟೋಬರ್ (ಹಿ.ಸ.): ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಹಾಗೂ ಬಿಳಿಗಿರಿರಂಗನ ಬೆಟ್ಟದ ಸಮೀಪದ ಹಾಡಿಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಪ್ರಜಾಸೇವೆ ಅಭಿಯಾನ ಕೈಗೊಳ್ಳಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್
ಸಚಿವ ರಘುಮೂರ್ತಿ  ಚಾಮರಾಜನಗರ ಜಿಲ್ಲೆಯ ವಿವಿಧ ಹಾಡಿಗಳಿಗೆ ಭೇಟಿ


ಚಾಮರಾಜನಗರ, 10 ಅಕ್ಟೋಬರ್ (ಹಿ.ಸ.):

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಹಾಗೂ ಬಿಳಿಗಿರಿರಂಗನ ಬೆಟ್ಟದ ಸಮೀಪದ ಹಾಡಿಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ವಿಶೇಷ ಪ್ರಜಾಸೇವೆ ಅಭಿಯಾನ ಕೈಗೊಳ್ಳಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ತಿಳಿಸಿದರು.

ಶನಿವಾರ ಬಿಳಿಗಿರಿರಂಗನ ಬೆಟ್ಟದ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಸಮೀಪದ ಹಾಡಿಗಳಿಗೆ ತೆರಳಿದ ಸಚಿವರು, ಆದಿವಾಸಿಗಳ ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಬುಡಕಟ್ಟು ಜನರು ವಾಸಿಸುವ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದು, ಅಲ್ಲಿನ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸರ್ಕಾರವೇ ಜನರ ಮನೆ ಬಾಗಿಲಿಗೆ ತೆರಳಿ ಸೇವೆ ಒದಗಿಸಬೇಕು. ಈ ಉದ್ದೇಶದಿಂದ ಹಾಡಿಗಳ ನಿವಾಸಿಗಳಿಗಾಗಿ ವಿಶೇಷ ಪ್ರಜಾಸೇವೆ ಅಭಿಯಾನ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಹಾಡಿಗಳಲ್ಲಿ ಕೆಲವರಿಗೆ 40ರಿಂದ 50 ವರ್ಷಗಳ ಹಿಂದೆ ನಿರ್ಮಿಸಿಕೊಟ್ಟಿರುವ ಮನೆಗಳು ಈಗ ಶಿಥಿಲಾವಸ್ಥೆಯಲ್ಲಿವೆ. ಈ ಕುರಿತು ಪರಿಶೀಲನೆ ನಡೆಸಲಾಗಿದ್ದು, ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಮುಖ್ಯಮಂತ್ರಿ ಆದಿವಾಸಿ ಗೃಹಭಾಗ್ಯ ಯೋಜನೆಯಡಿ ಅರ್ಹರಿಗೆ ಮನೆಗಳನ್ನು ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು. ಅರ್ಹ ಫಲಾನುಭವಿಗಳಿಗೆ ನಿಗದಿತ ಕಾಲಮಿತಿಯಲ್ಲಿ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಬಂಗ್ಲೆಪೋಡು, ಹಸಪೋಡು ಹಾಗೂ ಎರಕಲಗದ್ದೆ ಪೋಡು ಕಾಲೋನಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು, ಆದಿವಾಸಿಗಳ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದರು.

ಸೇತುವೆ, ವಿದ್ಯುತ್‌ ಸಂಪರ್ಕಕ್ಕೆ ಸೂಚನೆ

ಬಿಳಿಗಿರಿರಂಗನ ಬೆಟ್ಟದ ಮುಖ್ಯ ರಸ್ತೆಯಿಂದ ಮಂಜುಗುಡಿ ಪೋಡು ಹಾಗೂ ಕಲ್ಯಾಣಿ ಪೋಡು ಹಾಡಿಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.

ಮಂಜುಗುಡಿ ಪೋಡು ಹಾಗೂ ಕಲ್ಯಾಣಿ ಪೋಡು ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕವಿಲ್ಲ ಎಂಬ ನಿವಾಸಿಗಳ ದೂರಿಗೆ ಸ್ಪಂದಿಸಿದ ಸಚಿವರು, ಕೂಡಲೇ ಚೆಸ್ಕಾಂ ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಆಹಾರ ಕಿಟ್‌ಗಳ ವಿತರಣೆ ಶೀಘ್ರ

ಹಾಡಿಗಳ ನಿವಾಸಿಗಳು ಆಹಾರ ಕಿಟ್‌ಗಳು ಪೂರೈಕೆಯಾಗುತ್ತಿಲ್ಲ ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲವು ತಾಂತ್ರಿಕ ಸಮಸ್ಯೆಗಳಿಂದ ವಿತರಣೆಯಲ್ಲಿ ವಿಳಂಬವಾಗಿದೆ. ನಾಲ್ಕೈದು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದ್ದು, ಕೂಡಲೇ ಆಹಾರ ಕಿಟ್‌ಗಳನ್ನು ವಿತರಿಸಲಾಗುವುದು. ಬಾಕಿ ಉಳಿದಿರುವ ಕಿಟ್‌ಗಳನ್ನೂ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಆದಿವಾಸಿಗಳಿಗೆ ಆಧಾರ್‌ ಕಾರ್ಡ್‌, ಪಡಿತರ ಚೀಟಿ, ಹಕ್ಕುಪತ್ರ ಹಾಗೂ ಆದಾಯ ಪ್ರಮಾಣಪತ್ರ ಸೇರಿದಂತೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ದಾಖಲೆಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ದಾಖಲೆಗಳನ್ನು ವಿತರಿಸುವಂತೆ ತಹಶೀಲ್ದಾರ್‌ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಕುಡಿಯುವ ನೀರು ಪೂರೈಕೆಗೆ ತ್ವರಿತ ಕ್ರಮ

ಹಾಡಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಂಜಿನಿಯರ್‌ಗಳಿಂದ ಸಚಿವರು ಮಾಹಿತಿ ಪಡೆದರು. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವುದರಿಂದ ಕೆಲವು ತೊಡಕುಗಳಿವೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿದ ಸಚಿವರು, ಜಲ ಜೀವನ್‌ ಮಿಷನ್‌ ಯೋಜನೆಯಡಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ತಕ್ಷಣ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಸೂಚಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾಕಿ ಉಳಿದಿರುವ ಕೂಲಿ ಪಾವತಿಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಆದಿವಾಸಿ ಅಭಿವೃದ್ಧಿ ನಿಗಮ ಶೀಘ್ರ ಕಾರ್ಯಾರಂಭ

ಆದಿವಾಸಿ ಅಭಿವೃದ್ಧಿ ನಿಗಮವು ಅತಿ ಶೀಘ್ರದಲ್ಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ರಘುಮೂರ್ತಿ ತಿಳಿಸಿದರು.

ಇದೇ ವೇಳೆ ಕಾಡಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಕೇಂದ್ರವಾದ 'ಅಡವಿ'ಗೆ ಭೇಟಿ ನೀಡಿದ ಸಚಿವರು, ಶೀಗೆಕಾಯಿ, ನೆಲ್ಲಿಕಾಯಿ ಪುಡಿ, ನೇರಳೆ ಹಣ್ಣಿನ ಪಾನೀಯದ ಸಾಂದ್ರಣ ಸೇರಿದಂತೆ ವಿವಿಧ ಉತ್ಪನ್ನಗಳನ್ನು ವೀಕ್ಷಿಸಿ ಅವುಗಳ ಗುಣಮಟ್ಟದ ಕುರಿತು ಮಾಹಿತಿ ಪಡೆದರು.

ನಂತರ ಕೊಳ್ಳೇಗಾಲ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಆದಿವಾಸಿ ಮಕ್ಕಳ ವಸತಿ ಶಾಲೆಗಳ ಶಿಕ್ಷಕರನ್ನು ಭೇಟಿ ಮಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲರೂ ಶ್ರಮಿಸಬೇಕು. ಶಿಕ್ಷಣದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಸೂಚಿಸಿದರು.

ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ

ಸಚಿವ ರಘುಮೂರ್ತಿ ಅವರು ಕೊಣನಕೆರೆ ಆಶ್ರಮ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು. ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ದೊರೆತರೆ ಅವರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಹೀಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಅಶೋಕ್‌ ಡಿ.ಆರ್‌., ಜಂಟಿ ನಿರ್ದೇಶಕರಾದ ಕೆ.ಆರ್‌. ರಾಜಕುಮಾರ್‌, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಎಚ್‌. ಷಡಕ್ಷರಯ್ಯ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್‌.ಎಸ್‌. ಬಿಂದ್ಯಾ, ಆದಿವಾಸಿ ಸಮುದಾಯದ ಮುಖಂಡರಾದ ಮಾದೇಗೌಡ, ಬೊಮ್ಮಯ್ಯು, ಮಾರಮ್ಮ, ಬಸವರಾಜು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande