ತಾಂಬಾದಲ್ಲಿ ಮೈಸೂರು ದಸರಾ ಮಾದರಿಯ ನಾಡದೇವಿ ನವರಾತ್ರಿ ಉತ್ಸವ: ಅ.11ರಿಂದ ವೈಭವದ ಆಚರಣೆ
ವಿಜಯಪುರ, 10 ಅಕ್ಟೋಬರ್ (ಹಿ.ಸ.) ಮೈಸೂರು ದಸರಾ ವೈಭವದ ಮಾದರಿಯಲ್ಲಿಯೇ ವಿಜಯಪುರ ಜಿಲ್ಲೆಯ ತಾಂಬಾದಲ್ಲಿ ನಾಡದೇವಿ ನವರಾತ್ರಿ ಉತ್ಸವವನ್ನು ಈ ವರ್ಷವೂ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ನಾಗಠಾಣ ಮಾಜಿ ಶಾಸಕ ಡಾ. ದೇವಾನಂದ ಚವ್ಹಾಣ ತಿಳಿಸಿದರು. ವಿಜಯಪುರದಲ್ಲಿ ನಡೆದ
Dasara sidhate


ವಿಜಯಪುರ, 10 ಅಕ್ಟೋಬರ್ (ಹಿ.ಸ.)

ಮೈಸೂರು ದಸರಾ ವೈಭವದ ಮಾದರಿಯಲ್ಲಿಯೇ ವಿಜಯಪುರ ಜಿಲ್ಲೆಯ ತಾಂಬಾದಲ್ಲಿ ನಾಡದೇವಿ ನವರಾತ್ರಿ ಉತ್ಸವವನ್ನು ಈ ವರ್ಷವೂ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ನಾಗಠಾಣ ಮಾಜಿ ಶಾಸಕ ಡಾ. ದೇವಾನಂದ ಚವ್ಹಾಣ ತಿಳಿಸಿದರು.

ವಿಜಯಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.11ರಿಂದ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳೊಂದಿಗೆ ನಾಡದೇವಿ ನವರಾತ್ರಿ ಉತ್ಸವ ನಡೆಯಲಿದೆ ಎಂದರು.

ತಾಂಬಾದಲ್ಲಿ ಸಮಾಜ ಸೇವಕ ದಿ. ಫೂಲಸಿಂಗ್ ಚವ್ಹಾಣ ಹಾಗೂ ಸಮಾನ ಮನಸ್ಕರು ಸೇರಿಕೊಂಡು 1972ರಲ್ಲಿ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಕಳೆದ 55 ವರ್ಷಗಳಿಂದಲೂ ಮೈಸೂರು ದಸರಾ ಮಾದರಿಯಲ್ಲಿ ಉತ್ಸವವನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಉತ್ಸವವನ್ನು ಅತ್ಯಂತ ವೈಭವದಿಂದ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಅ.11ರಂದು ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಬಂಥನಾಳದ ಶ್ರೀ ಸಂಗನಬಸವ ದೇವರ ಸಾನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಸಿಂದಗಿ ಶಾಸಕ ಅಶೋಕ ಮನಗೂಳಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಹಗರಿ ಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯಕ ಹಾಗೂ ಸಮಾಜ ಸೇವಕ ಡಾ. ಪ್ರಭುಗೌಡ ಪಾಟೀಲ ಅವರು ಕುಂಭಮೇಳ ಮತ್ತು ವೈಭವದ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಜಗದಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜಿ.ಬಿ. ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಅನ್ನದಾಸೋಹಕ್ಕೆ ಮಾಜಿ ಶಾಸಕ ರಮೇಶ ಭೂಸನೂರ ಚಾಲನೆ ನೀಡಲಿದ್ದಾರೆ. ಶ್ರೀ ಜಗನು ಮಹಾರಾಜರು, ಶ್ರೀ ಸೋಮಲಿಂಗ ಮಹಾರಾಜರು ಹಾಗೂ ಶ್ರೀ ಧನಸಿಂಗ್ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ವಿಶ್ರಾಂತ ಡಿವೈಎಸ್ಪಿ ಆರ್.ಕೆ. ನಾಯಕ, ಸಿಪಿಐ ಸುನೀಲ ಪಾಟೀಲ, ಬಿಜೆಪಿ ಮುಖಂಡ ಮಹೇಂದ್ರಕುಮಾರ ನಾಯಕ, ಜಿ.ಪಂ. ಮಾಜಿ ಸದಸ್ಯ ಪಂಚಪ್ಪ ಕಲಬುರ್ಗಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಚವ್ಹಾಣ ವಿವರಿಸಿದರು.

ಅಘೋರಿ ಕಾರ್ಯಕ್ರಮ ವಿಶೇಷ ಆಕರ್ಷಣೆ

ಮುಂಬೈನ ಮಹಾಕಾಲಿ ಇವೆಂಟ್ಸ್ ಸಹಯೋಗದಲ್ಲಿ ನಡೆಯಲಿರುವ ಅಘೋರಿ ಕಾರ್ಯಕ್ರಮ ಈ ಬಾರಿಯ ಉತ್ಸವದ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿದೆ. ಇದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಲಿವೆ ಎಂದು ಅವರು ತಿಳಿಸಿದರು.

ಅ.12ರಂದು ರಾತ್ರಿ 8 ಗಂಟೆಗೆ ಮುಕ್ತ ಕೋಲಾಟ ನಡೆಯಲಿದ್ದು, ಅ.13ರಂದು ಬೆಳಿಗ್ಗೆ 11 ಗಂಟೆಗೆ ಖೋ-ಖೋ ಪಂದ್ಯಾವಳಿ ಆಯೋಜಿಸಲಾಗಿದೆ. ಅದೇ ದಿನ ರಾತ್ರಿ 8 ಗಂಟೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಅ.14ರಂದು ಮ್ಯೂಸಿಕಲ್ ಚೇರ್ ಸೇರಿದಂತೆ ಹಿಟ್ಟಿನಲ್ಲಿ ನಾಣ್ಯ ತೆಗೆಯುವಂತಹ ವಿಭಿನ್ನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಅ.15ರಂದು ಸಮಸ್ತ ನಾಡಿನ ಜನತೆಯ ಒಳಿತಿಗಾಗಿ ನವಚಂಡಿ ಹೋಮ ಹಮ್ಮಿಕೊಳ್ಳಲಾಗಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಾರ್ವಜನಿಕರಿಗಾಗಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಅವರು ಮನವಿ ಮಾಡಿದರು.

ಉತ್ಸವ ಸಮಿತಿ ಅಧ್ಯಕ್ಷ ಅಭಿನವ ಚವ್ಹಾಣ, ಪ್ರೀತಮ್ ಚವ್ಹಾಣ, ದೊಡಮನಿ ಸೇರಿದಂತೆ ಹಲವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande