ತೆಲಂಗಾಣಕ್ಕೆ ನಾರಾಯಣಪುರ ಜಲಾಶಯದ ನೀರು ಹರಿಸುವುದನ್ನು ನಿಲ್ಲಿಸಿ: ಅಖಂಡ ಕರ್ನಾಟಕ ರೈತ ಸಂಘ ಆಗ್ರಹ
ವಿಜಯಪುರ, 10 ಅಕ್ಟೋಬರ್ (ಹಿ.ಸ.) ನಾರಾಯಣಪುರ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ ನೀರು ಹರಿಸುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ವಿಜಯಪುರ ನಗರದ ಅಂಬೇಡ್ಕರ್ ವೃತದಲ್ಲಿ ಪ್ರತಿಭಟನೆ ನಡೆಸಿದರು. ನಾರಾಯಣಪುರ ಜಲಾಶಯದಿಂದ ಗುರುವಾರ ರಾತ್ರಿ ತೆಲಂಗಾ
Pratibhatane


ವಿಜಯಪುರ, 10 ಅಕ್ಟೋಬರ್ (ಹಿ.ಸ.)

ನಾರಾಯಣಪುರ ಜಲಾಶಯದಿಂದ ತೆಲಂಗಾಣ ರಾಜ್ಯಕ್ಕೆ ನೀರು ಹರಿಸುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ವಿಜಯಪುರ ನಗರದ ಅಂಬೇಡ್ಕರ್ ವೃತದಲ್ಲಿ ಪ್ರತಿಭಟನೆ ನಡೆಸಿದರು.

ನಾರಾಯಣಪುರ ಜಲಾಶಯದಿಂದ ಗುರುವಾರ ರಾತ್ರಿ ತೆಲಂಗಾಣ ರಾಜ್ಯಕ್ಕೆ ಸುಮಾರು 2,667 ಕ್ಯೂಸೆಕ್ ನೀರು ಹರಿಸಲಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ತಲೆದೋರಿರುವ ಸಂದರ್ಭದಲ್ಲಿ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಿರುವ ನಡುವೆಯೇ ಹೊರರಾಜ್ಯಕ್ಕೆ ನೀರು ಹರಿಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಅಗತ್ಯ ನೀರಿನ ಕೊರತೆ ಎದುರಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜನರು ಹಾಗೂ ಜಾನುವಾರುಗಳ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಅಗತ್ಯಗಳನ್ನು ಕಡೆಗಣಿಸಿ ತೆಲಂಗಾಣಕ್ಕೆ ನೀರು ಹರಿಸುವುದು ರೈತರು ಹಾಗೂ ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಸಂಘದ ಮುಖಂಡ ಅರವಿಂದ ಕುಲಕರ್ಣಿ ಹೇಳಿದರು.

ನಾರಾಯಣಪುರ ಜಲಾಶಯದ ನೀರು ಈ ಭಾಗದ ಕೃಷಿ ಹಾಗೂ ಕುಡಿಯುವ ನೀರಿನ ಅಗತ್ಯಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಬರದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮೊದಲು ಕರ್ನಾಟಕದ ರೈತರು, ಜನರು ಮತ್ತು ಜಾನುವಾರುಗಳ ಅಗತ್ಯಕ್ಕೆ ನೀರು ಲಭ್ಯವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತೆಲಂಗಾಣಕ್ಕೆ ನೀರು ಹರಿಸುವ ನಿರ್ಧಾರವನ್ನು ಕೂಡಲೇ ಮರುಪರಿಶೀಲಿಸಿ, ಜಲಾಶಯದ ನೀರನ್ನು ಹೊರರಾಜ್ಯಕ್ಕೆ ಹರಿಸುವುದನ್ನು ನಿಲ್ಲಿಸಬೇಕು. ಬರ ಪರಿಸ್ಥಿತಿಯಲ್ಲಿ ನೀರಿನ ಲಭ್ಯತೆ, ಜಲಾಶಯಗಳ ಸಂಗ್ರಹ ಪ್ರಮಾಣ ಹಾಗೂ ಮುಂದಿನ ದಿನಗಳ ಕುಡಿಯುವ ನೀರಿನ ಅಗತ್ಯವನ್ನು ಪರಿಗಣಿಸಿ ಸರ್ಕಾರ ಸಮರ್ಪಕ ನೀರು ನಿರ್ವಹಣಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಕುರಿತು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಕೂಡಲೇ ನೀರು ಹರಿಸುವುದನ್ನು ಸ್ಥಗಿತಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande