
ವಿಜಯಪುರ, 10 ಅಕ್ಟೋಬರ್ (ಹಿ.ಸ.)
ಹಸಿರು ಸಂರಕ್ಷಣೆ, ಆರೋಗ್ಯ ಜಾಗೃತಿ ಹಾಗೂ ವಿಜಯಪುರದ ಶ್ರೀಮಂತ ಐತಿಹಾಸಿಕ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಸಾರುವ 7ನೇ ಆವೃತ್ತಿಯ Vrukshathon Heritage Run 2026ಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಡಿಸೆಂಬರ್ 13ರಂದು ವಿಜಯಪುರದಲ್ಲಿ ಐತಿಹಾಸಿಕ ಓಟ ನಡೆಯಲಿದೆ.
5ಕೆ, 10ಕೆ ಹಾಗೂ 21ಕೆ ವಿಭಾಗಗಳಲ್ಲಿ ನಡೆಯಲಿರುವ ಈ ಓಟದಲ್ಲಿ ಸಾರ್ವಜನಿಕರು, ಯುವಜನರು, ಕ್ರೀಡಾಪಟುಗಳು ಹಾಗೂ ಆರೋಗ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಮನವಿ ಮಾಡಿದ್ದಾರೆ.
ವೃಕ್ಷಥಾನ್ ಕೇವಲ ಓಟಕ್ಕೆ ಸೀಮಿತವಾಗದೆ, ಹಸಿರು ವಿಜಯಪುರದ ಸಂದೇಶವನ್ನು ಸಾರುವ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಅಭಿಯಾನವಾಗಿದೆ. ಇದರ ಜೊತೆಗೆ ವಿಜಯಪುರದ ಐತಿಹಾಸಿಕ ಸ್ಮಾರಕಗಳು, ಸಾಂಸ್ಕೃತಿಕ ಪರಂಪರೆ ಮತ್ತು ನಗರದ ವೈಭವವನ್ನು ದೇಶ-ವಿದೇಶಗಳ ಗಮನಕ್ಕೆ ತರುವ ಉದ್ದೇಶವೂ ಹೊಂದಿದೆ.
ನೋಂದಣಿಗೆ ಅ.11ರ ಸಂಜೆ 5 ಗಂಟೆಯವರೆಗೆ ಮಾತ್ರ ಅವಕಾಶವಿದ್ದು, ಆಸಕ್ತರು ಕೊನೆಯ ಕ್ಷಣದವರೆಗೆ ಕಾಯದೆ ನೋಂದಣಿ ಮಾಡಿಕೊಳ್ಳುವಂತೆ ಸಚಿವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
“ಪ್ರತಿಯೊಂದು ಹೆಜ್ಜೆಯಲ್ಲೂ ಹಸಿರಿನ ಸಂದೇಶ ಸಾರೋಣ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ ಹಾಗೂ ವಿಜಯಪುರದ ಶ್ರೀಮಂತ ಪರಂಪರೆಯನ್ನು ವಿಶ್ವದ ಗಮನಕ್ಕೆ ತರೋಣ” ಎಂಬ ಆಶಯದೊಂದಿಗೆ ವೃಕ್ಷಥಾನ್ ಹೆರಿಟೇಜ್ ರನ್ ಆಯೋಜಿಸಲಾಗುತ್ತಿದೆ.
ಆಸಕ್ತರು www.vrukshathon.co.in ಮೂಲಕ ನೋಂದಣಿ ಮಾಡಿಕೊಳ್ಳುಬಹುದಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande