
ಗದಗ, 10 ಅಕ್ಟೋಬರ್ (ಹಿ.ಸ.)
ಮಹಾತ್ಮ ಗಾಂಧೀಜಿಯವರ ಜೀವನವೇ ಒಂದು ಪ್ರಯೋಗಶಾಲೆಯಾಗಿತ್ತು. ದೇಶದ ಅನೇಕ ಮಹಾತ್ಮರು, ಶರಣರು ಹಾಗೂ ದಾರ್ಶನಿಕರು ಸಾರಿದ ಸಂದೇಶಗಳನ್ನು ಆಳವಾಗಿ ಅರಿತುಕೊಂಡು, ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಮಹಾನ್ ವ್ಯಕ್ತಿ ಗಾಂಧೀಜಿಯವರು ಎಂದು ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ನಡೆದ 2818ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಗಾಂಧೀಜಿಯವರು ಅನೇಕ ನೈತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸತ್ಯವೇ ಈಶ್ವರ, ಈಶ್ವರನೇ ಸತ್ಯ ಎಂದು ಪ್ರತಿಪಾದಿಸಿದ ಅವರು ಸರಳ ಜೀವನದ ಮೂಲಕ ನೈತಿಕತೆಯಲ್ಲಿರುವ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟರು. ಅವರ ಜೀವನವೇ ಅವರ ಸಂದೇಶವಾಗಿತ್ತು ಎಂದರು.
ಸತ್ಯ ಮತ್ತು ಅಹಿಂಸೆಗಳನ್ನು ಅಸ್ತ್ರವನ್ನಾಗಿಸಿಕೊಂಡು ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಯಕತ್ವ ವಹಿಸಿದ ಗಾಂಧೀಜಿಯವರು, ಬಲಿಷ್ಠ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ಪ್ರಗತಿಯತ್ತ ಸಾಗಲು ಸಾಧ್ಯ ಎಂದು ಹೇಳಿದರು.
ದೇಶದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನವೂ ಅತ್ಯಂತ ಸರಳ ಮತ್ತು ಸಹಜವಾಗಿತ್ತು. ಕೇವಲ 17 ತಿಂಗಳ ಆಡಳಿತಾವಧಿಯಲ್ಲಿ ತಮ್ಮ ಕಾರ್ಯವೈಖರಿಯಿಂದ ಜನಪ್ರಿಯರಾಗಿದ್ದ ಅವರು, ಭೀಕರ ಬರಗಾಲ ಹಾಗೂ ಸಂಕಷ್ಟದ ಸಂದರ್ಭದಲ್ಲಿ ದೇಶಕ್ಕೆ ಸಮರ್ಥ ನಾಯಕತ್ವ ನೀಡಿದರು. ಬರಗಾಲದ ಸಂದರ್ಭದಲ್ಲಿ ವಾರಕ್ಕೊಮ್ಮೆ ಉಪವಾಸ ಆಚರಿಸುವಂತೆ ಜನರಿಗೆ ಕರೆ ನೀಡಿದ್ದ ಅವರು, 'ಜೈ ಜವಾನ್, ಜೈ ಕಿಸಾನ್' ಘೋಷಣೆಯ ಮೂಲಕ ಸೈನಿಕರು ಮತ್ತು ರೈತರಿಗೆ ಗೌರವ ಸಲ್ಲಿಸಿದರು ಎಂದು ಸ್ಮರಿಸಿದರು.
ಮುಳಗುಂದದ ಖ್ಯಾತ ವೈದ್ಯ ಡಾ. ಎಸ್.ಸಿ. ಚವಡಿ ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ತಾವು ವೈದ್ಯಕೀಯ ವೃತ್ತಿ ನಿರ್ವಹಿಸುತ್ತಿದ್ದೇನೆ. ರೋಗಿಗಳಲ್ಲಿ ದೇವರನ್ನು ಕಾಣುತ್ತಾ ಚಿಕಿತ್ಸೆ ನೀಡುತ್ತಿದ್ದೇನೆ. ಈ ಮಹನೀಯರ ಜೀವನ ಸಂದೇಶಗಳನ್ನು ಪಾಲಿಸುವುದು ಇಂದಿನ ಸಮಾಜದ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಸಿದ್ದಲಿಂಗೇಶ ಸಜ್ಜನಶೆಟ್ಟರ, ಶಿಲ್ಪಾ ಮ್ಯಾಗೇರಿ ಹಾಗೂ ನೀಲಮ್ಮ ಅಂಗಡಿ ಅವರು ಮಹಾತ್ಮ ಗಾಂಧೀಜಿಯವರ ಕುರಿತ ಕವನಗಳನ್ನು ವಾಚಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ದಾನಯ್ಯ ಗಣಾಚಾರಿ ಹಾಗೂ ಅವರ ಪತ್ನಿಯನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು. ಸಂಘದ ಸೇವಾವಧಿಯಲ್ಲಿ ಲಿಂಗಾಯತ ಪ್ರಗತಿಶೀಲ ಸಂಘವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದ್ದನ್ನು ಸ್ಮರಿಸಿ ಅವರ ಸೇವೆಯನ್ನು ಅಭಿನಂದಿಸಿದರು.
ಖ್ಯಾತ ಗಾಯಕ ಪಂಡಿತ್ ವೆಂಕಟೇಶಕುಮಾರ ಆಲ್ಕೋಡ್ ಹಾಗೂ ತಂಡದವರಿಂದ ಗಾಂಧೀಜಿಯವರ ಕುರಿತ ವಿವಿಧ ಕಾವ್ಯಗಾಯನ ಕಾರ್ಯಕ್ರಮ ನಡೆಯಿತು. ವಿಶೇಷವಾಗಿ ಡಿ.ಎಸ್. ಕರ್ಕಿ ಅವರ ಕಾವ್ಯಗಾಯನ ಕೇಳುಗರ ಗಮನ ಸೆಳೆಯಿತು.
ಗದುಗಿನ ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೆದ ಅವರಿಗೆ ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಸ್ಪೋರ್ಟ್ಸ್ ಫೌಂಡೇಶನ್ ನೀಡಿದ ರಾಜ್ಯಮಟ್ಟದ ರಾಜಯೋಗಿ ಡಿ. ಕೃಷ್ಣಮಾಚಾರ್ಯ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಪ್ರೀತಮ್ ಕುಂಬಾರ ಧರ್ಮಗ್ರಂಥ ಪಠಣ ಹಾಗೂ ಪ್ರತೀಕ್ಷಾ ಕುಂಬಾರ ವಚನ ಚಿಂತನ ನಡೆಸಿದರು. ಮೃತ್ಯುಂಜಯ ಗುರುನಾಥ ಸುತಾರ ಪ್ರಾರ್ಥಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ದಾಸೋಹ ಸೇವೆಯನ್ನು ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಶಿವಾನುಭವ ಸಮಿತಿ ಅಧ್ಯಕ್ಷ ರಮೇಶ ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP