
ವಿಜಯಪುರ, 10 ಅಕ್ಟೋಬರ್ (ಹಿ.ಸ.)
ಮಹಾರಾಷ್ಟ್ರದಿಂದ ಕಾಡುಹಂದಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜಾಲದ ಮೇಲೆ ಖಚಿತ ಮಾಹಿತಿಯ ಆಧಾರದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ 20 ಜೀವಂತ ಕಾಡುಹಂದಿಗಳನ್ನು ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ವಿಜಯಪುರ ಕ್ಷೇತ್ರದ ತಿಡಗುಂದಿ ಟೋಲ್ ನಾಕಾ ಬಳಿ ನಡೆದಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕಾಡುಹಂದಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಧಾರವಾಡ ಮೂಲದ ನಾಗರಾಜ್, ಶಂಕ್ರೆಪ್ಪ ಹಾಗೂ ಅಭಿಷೇಕ್ ಎಂಬ ಮೂವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳು ಸಾಮಾನ್ಯ ಹಂದಿಗಳ ಸಾಕಾಣಿಕೆ ನಡೆಸುವ ನೆಪದಲ್ಲಿ ಕಾಡುಹಂದಿಗಳನ್ನು ಅಕ್ರಮವಾಗಿ ಖರೀದಿ ಮತ್ತು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಇಂಡಿ ಭಾಗದಲ್ಲಿ ಕಾಡುಹಂದಿಗಳನ್ನು ಖರೀದಿಸಿ, ಅವುಗಳನ್ನು ಗೋವಾ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಾಗಿಸಿ ಮಾರಾಟ ಮಾಡಲು ಮುಂದಾಗಿದ್ದರು ಎಂಬ ಮಾಹಿತಿ ಅಧಿಕಾರಿಗಳಿಂದ ಲಭ್ಯವಾಗಿದೆ.
ಮಾರುಕಟ್ಟೆಯಲ್ಲಿ ಕಾಡುಹಂದಿಯ ಮಾಂಸಕ್ಕೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಆರೋಪಿಗಳು ಈ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಆರ್ಎಫ್ಒ ಸಂತೋಷ ಅಜೂರ ತಿಳಿಸಿದ್ದಾರೆ.
ತಿಡಗುಂದಿ ಟೋಲ್ ನಾಕಾ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅನುಮಾನಗೊಂಡ ಅಧಿಕಾರಿಗಳು ವಾಹನವನ್ನು ಪರಿಶೀಲಿಸಿದಾಗ 20 ಜೀವಂತ ಕಾಡುಹಂದಿಗಳು ಪತ್ತೆಯಾಗಿವೆ. ಕೂಡಲೇ ಅವುಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ಬಂಧಿಸಲಾಗಿದೆ.
ಅಕ್ರಮವಾಗಿ ಕಾಡುಹಂದಿಗಳನ್ನು ಸಾಗಾಟ ಮಾಡಿರುವ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಕಾಡುಪ್ರಾಣಿಗಳ ಅಕ್ರಮ ಬೇಟೆ, ಸಾಗಾಟ ಹಾಗೂ ಮಾರಾಟದ ವಿರುದ್ಧ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ವಶಪಡಿಸಿಕೊಂಡ ಕಾಡುಹಂದಿಗಳ ಮುಂದಿನ ಸಂರಕ್ಷಣೆ ಹಾಗೂ ಅವುಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande