
ಬೆಂಗಳೂರು, 01 ಅಕ್ಟೋಬರ್ (ಹಿ.ಸ.):
ವಿಧಾನಸೌಧದ ಗ್ರ್ಯಾಂಡ್ಸ್ಟೆಪ್ಸ್ ಮೇಲೆ ಉರ್ದು ಹಬ್ಬ ಆಚರಿಸಲು ಸರ್ಕಾರ ಮುಂದಾಗಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹಾಗೂ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕರವೇ ಅಧ್ಯಕ್ಷ ನಾರಾಯಣಗೌಡ ಎಕ್ಸ್ ಖಾತೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ವಿಧಾನಸೌಧದ ಗ್ರ್ಯಾಂಡ್ಸ್ಟೆಪ್ಸ್ ಮೇಲೆ ಉರ್ದು ಹಬ್ಬ ಆಚರಿಸುವ ನಿರ್ಧಾರ ಅವಿವೇಕತನ, ಅಪ್ರಬುದ್ಧ ಹಾಗೂ ದುರಹಂಕಾರದ ನಡೆ. ಏನು ಮಾಡಿದರೂ ನಡೆಯುತ್ತದೆ ಎಂಬ ಅಧಿಕಪ್ರಸಂಗದ ನಿಲುವು ಇದು. ಸರ್ಕಾರವೇ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ನಿಂತಂತೆ ಕಾಣುತ್ತಿದೆ. ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ,” ಎಂದು ನಾರಾಯಣಗೌಡ ಹೇಳಿದ್ದಾರೆ.
“ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅದನ್ನು ಮಾಡಲಿ. ಉರ್ದು ಹಬ್ಬದ ನಿರ್ಧಾರ ಎಲ್ಲಿಂದ ಬಂತು, ಯಾರನ್ನು ಕೇಳಿ ಈ ತೀರ್ಮಾನ ಕೈಗೊಳ್ಳಲಾಗಿದೆ? ಕನ್ನಡಿಗರ ಮೇಲೆ ಉರ್ದು ಭಾಷಿಕರನ್ನು ಹಾಗೂ ಉರ್ದು ಭಾಷಿಕರ ಮೇಲೆ ಕನ್ನಡಿಗರನ್ನು ಎತ್ತಿಕಟ್ಟುವ ಹುನ್ನಾರ ಇದಾಗಿದೆ,” ಎಂದು ಅವರು ಆರೋಪಿಸಿದ್ದಾರೆ.
ಉರ್ದು ವಾರ್ತೆ ವಿಚಾರವಾಗಿ ನಡೆದಿದ್ದ ಕೋಮುಗಲಭೆಯನ್ನು ಸರ್ಕಾರ ಮರೆತಿದೆಯೇ ಎಂದು ಪ್ರಶ್ನಿಸಿರುವ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಲೇ ಉರ್ದು ಹಬ್ಬ ಆಚರಣೆಯ ನಿರ್ಧಾರವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ವಿಧಾನಸೌಧದಲ್ಲಿ ಉರ್ದು ಹಬ್ಬ ಆಚರಣೆಗೆ ಬಿಜೆಪಿ ನಾಯಕರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, “ಶಾಲೆಗಳಲ್ಲಿದ್ದ ಉರ್ದು ಈಗ ವಿಧಾನಸೌಧದ ಮೆಟ್ಟಿಲುಗಳಿಗೆ ಬಂದಿದೆ. ಎಂದೂ ಇಲ್ಲದ ಈ ಪದ್ಧತಿಯನ್ನು ಯಾಕೆ ಮಾಡುತ್ತಿದ್ದೀರಿ? ಇದು ಓಲೈಕೆ ರಾಜಕಾರಣ ಅಲ್ಲವೇ? ವೋಟ್ ಬ್ಯಾಂಕ್ಗಾಗಿ ಕರ್ನಾಟಕದ ಗೌರವ ಕಳೆಯುವ ಕೆಲಸವಾಗುತ್ತಿದೆ,” ಎಂದು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದು, ಅಲ್ಪಸಂಖ್ಯಾತರನ್ನು ಓಲೈಸಲು ಕಾಂಗ್ರೆಸ್ ಇಂತಹ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ. “ಕನ್ನಡ ರಾರಾಜಿಸಬೇಕಾದ ಜಾಗದಲ್ಲಿ ಉರ್ದು ಹಬ್ಬ ಆಚರಣೆ ಮೂಲಕ ಒಡೆದು ಆಳುವ ನೀತಿ ಅನುಸರಿಸಲಾಗುತ್ತಿದೆ,” ಎಂದು ಅವರು ಹೇಳಿದ್ದಾರೆ.
ಇನ್ನು ಸರ್ಕಾರದ ನಿರ್ಧಾರವನ್ನು ಸಚಿವ ರಿಜ್ವಾನ್ ಅರ್ಷದ್ ಸಮರ್ಥಿಸಿಕೊಂಡಿದ್ದಾರೆ. “ನೈಜ ಕನ್ನಡ ಪರ ಹೋರಾಟಗಾರರು ವಿಧಾನಸೌಧದ ಗ್ರ್ಯಾಂಡ್ಸ್ಟೆಪ್ಸ್ ಮೇಲೆ ಉರ್ದು ಹಬ್ಬ ಆಚರಣೆಯನ್ನು ವಿರೋಧಿಸುವುದಿಲ್ಲ. ನನ್ನ ಮಾತೃಭಾಷೆ ಉರ್ದು, ಆದರೆ ನನ್ನ ಹೃದಯದ ಭಾಷೆ ಕನ್ನಡ. ನಾನೇನು ಕನ್ನಡದವನಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.
ತುಳು ಭಾಷೆಗೆ ಸ್ಥಾನಮಾನ ನೀಡಿದಾಗಲೂ ವಿರೋಧ ವ್ಯಕ್ತವಾಗಿರಲಿಲ್ಲ. ಕನ್ನಡಿಗರು ವಿಶಾಲ ಹೃದಯದವರು. ಸಮಾಜವನ್ನು ಒಡೆಯಲು ಬಯಸುವವರೇ ಇಂತಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R