ಮನೆಯಿಂದಲೇ ರೇಷನ್ ಕಾರ್ಡ್ ಇ-ಕೆವೈಸಿ; ಹೊಸ ಆ್ಯಪ್ಗೆ ಚಾಲನೆ
ಪಡಿತರ ಚೀಟಿದಾರರ ಅನುಕೂಲಕ್ಕಾಗಿ ಆಹಾರ ಇಲಾಖೆ ಹೊಸ ಇ-ಕೆವೈಸಿ ಮೊಬೈಲ್ ಆ್ಯಪ್ ಸಿದ್ಧಪಡಿಸಿದ್ದು, ಮನೆಯಲ್ಲೇ ಕುಳಿತು ಸ್ಮಾರ್ಟ್ಫೋನ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸುವ ಅವಕಾಶ ಕಲ್ಪಿಸಲಾಗಿದೆ. ಅ.1ರಂದು ಸಚಿವ ರಿಜ್ವಾನ್ ಅರ್ಷದ್ ಆ್ಯಪ್ಗೆ ಚಾಲನೆ ನೀಡಲಿದ್ದಾರೆ.
ಆ್ಯಪ್ ಬಿಡುಗಡೆ ಮಾಡಿದ ಸಚಿವ ರಿಜ್ವಾನ್ ಅರ್ಷದ್


ಬೆಂಗಳೂರು, 01 ಅಕ್ಟೋಬರ್ (ಹಿ.ಸ.):

ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಲು ನ್ಯಾಯಬೆಲೆ ಅಂಗಡಿಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಗುರುವಾರ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಬ್ರಾಡ್ವೇ ರಾಜೀವ್ ಗಾಂಧಿ ಕಾಲೋನಿಯಲ್ಲಿ ಆ್ಯಪ್ಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರ ಇ-ಕೆವೈಸಿ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಇದುವರೆಗೆ ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳು, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾಗಿತ್ತು.

ಸರ್ವರ್ ಸಮಸ್ಯೆ, ಬೆರಳಚ್ಚು ಗುರುತಾಗದಿರುವುದು ಸೇರಿದಂತೆ ವಿವಿಧ ತಾಂತ್ರಿಕ ತೊಂದರೆಗಳಿಂದಾಗಿ ವೃದ್ಧರು, ಅಂಗವಿಕಲರು ಹಾಗೂ ಕೂಲಿ ಕಾರ್ಮಿಕರು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದರು.

ಮನೆಯಲ್ಲೇ ಇ-ಕೆವೈಸಿ

ಹೊಸ ಮೊಬೈಲ್ ಆ್ಯಪ್ ಮೂಲಕ ಸ್ಮಾರ್ಟ್ಫೋನ್ ಹೊಂದಿರುವ ಪಡಿತರ ಚೀಟಿದಾರರು ಮನೆಯಲ್ಲೇ ಕುಳಿತು ತಮ್ಮ ಕುಟುಂಬದ ಸದಸ್ಯರ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ. ಬೆರಳಚ್ಚು ಗುರುತಿಸಲು ಸಾಧ್ಯವಾಗದ ಹಿರಿಯರು ಹಾಗೂ ಮಕ್ಕಳಿಗೆ ಮುಖಚಹರೆ ಗುರುತಿಸುವ ತಂತ್ರಜ್ಞಾನದ ಮೂಲಕ ಇ-ಕೆವೈಸಿ ಮಾಡುವ ವ್ಯವಸ್ಥೆಯೂ ಇರಲಿದೆ.

ಆ್ಯಪ್ ಮೂಲಕ ಇ-ಕೆವೈಸಿ ಪ್ರಕ್ರಿಯೆ ಉಚಿತವಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿದ್ದು, ಸೇವಾ ಕೇಂದ್ರಗಳು ಅಥವಾ ಸೈಬರ್ ಕೆಫೆಗಳಿಗೆ ತೆರಳಿ ಹಣ ಪಾವತಿಸುವ ಅಗತ್ಯ ಇರುವುದಿಲ್ಲ.

ಫಲಾನುಭವಿಗಳಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೆ, ಪಡಿತರ ಸೇವೆಗಳಲ್ಲಿ ತಂತ್ರಜ್ಞಾನ, ಪಾರದರ್ಶಕತೆ ಮತ್ತು ವೇಗವನ್ನು ಮತ್ತಷ್ಟು ಹೆಚ್ಚಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ ಹೇಳಿದರು.

--------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande