ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ: ಅಂಗಡಿ ಮೇಲೆ ಅಧಿಕಾರಿಗಳ ದಾಳಿ
ನೀಲಸಂದ್ರದ ಬಜಾರ್ ಸ್ಟ್ರೀಟ್ನ ಅಂಗಡಿಯೊಂದರ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು, ಅವಧಿ ಮೀರಿದ ಹಾಗೂ ಫಂಗಸ್ ಹಿಡಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಮನುಷ್ಯರು ಸೇವಿಸುವ ಆಹಾರದ ಪಕ್ಕದಲ್ಲೇ ಡಾಗ್ ಫುಡ್ ಇಟ್ಟಿರುವುದು ಕೂಡ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
expired-food-products-sold-in-bengaluru-nilasandra-shop-raided


ಬೆಂಗಳೂರು, 01 ಅಕ್ಟೋಬರ್ (ಹಿ.ಸ.):

ಅವಧಿ ಮೀರಿದ ಹಾಗೂ ಕೊಳೆತ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ನಗರದ ಪೂರ್ವ ವಿಭಾಗದ ಆಹಾರ ಸುರಕ್ಷತಾ ಅಧಿಕಾರಿಗಳ ತಂಡವು ನೀಲಸಂದ್ರದ ಬಜಾರ್ ಸ್ಟ್ರೀಟ್ನಲ್ಲಿರುವ ದಿನಸಿ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.ಅಂಗಡಿಯಲ್ಲಿ ತರಕಾರಿ, ಹಣ್ಣುಗಳು, ಹಿಟ್ಟು, ಟೂತ್ಪೇಸ್ಟ್ ಸೇರಿದಂತೆ ಹಲವು ಅವಧಿ ಮೀರಿದ ವಸ್ತುಗಳು ಪತ್ತೆಯಾಗಿವೆ.

ಕೆಲವು ಆಹಾರ ಪದಾರ್ಥಗಳಿಗೆ ಫಂಗಸ್ ಕೂಡ ಬಂದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಂಗಡಿಯ ಸ್ವಚ್ಛತೆ ಹಾಗೂ ವಸ್ತುಗಳ ಸಂಗ್ರಹಣೆಯ ಸ್ಥಿತಿಯ ಬಗ್ಗೆಯೂ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಮನುಷ್ಯರು ಸೇವಿಸುವ ಆಹಾರ ಪದಾರ್ಥಗಳ ಪಕ್ಕದಲ್ಲಿಯೇ ನಾಯಿಗಳಿಗೆ ನೀಡುವ ಡಾಗ್ ಫುಡ್ ಅನ್ನು ಇರಿಸಿ ಮಾರಾಟ ಮಾಡುತ್ತಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.

ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ಸಂಗ್ರಹಿಸದೇ ಇಟ್ಟಿರುವುದು ಹಾಗೂ ಸ್ವಚ್ಛತೆಯ ಕೊರತೆಯೂ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಇಲಾಖೆಯ ಫುಡ್ ಇನ್ಸ್ಪೆಕ್ಟರ್ಗಳಾದ ಆನಂದ್, ಆನಂತ್, ಮಂಜುನಾಥ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಅಂಗಡಿಯಲ್ಲಿದ್ದ ವಸ್ತುಗಳನ್ನು ಪರಿಶೀಲಿಸಿದ್ದಾರೆ.

ಅವಧಿ ಮೀರಿದ ಹಾಗೂ ಹಾನಿಗೊಳಗಾದ ಪದಾರ್ಥಗಳ ಕುರಿತು ಮಾದರಿಗಳನ್ನು ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆಸಲಾಗಿದೆ.

“ಅಂಗಡಿಯಲ್ಲಿ ಅವಧಿ ಮೀರಿದ ಹಾಗೂ ಸರಿಯಾಗಿ ಸಂಗ್ರಹಿಸದ ಹಲವು ಆಹಾರ ಪದಾರ್ಥಗಳು ಕಂಡುಬಂದಿವೆ. ಕೆಲವು ವಸ್ತುಗಳಿಗೆ ಫಂಗಸ್ ಬಂದಿರುವುದು ಗಮನಕ್ಕೆ ಬಂದಿದೆ. ಮನುಷ್ಯರು ಸೇವಿಸುವ ಆಹಾರ ಪದಾರ್ಥಗಳೊಂದಿಗೆ ಡಾಗ್ ಫುಡ್ ಅನ್ನು ಕೂಡ ಅಸಮರ್ಪಕವಾಗಿ ಇರಿಸಲಾಗಿತ್ತು.

ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ ಕಂಡುಬಂದಿರುವ ಹಿನ್ನೆಲೆಯಲ್ಲಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಆಹಾರ ಸುರಕ್ಷತಾ ಅಧಿಕಾರಿ ಆನಂದ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande