
ಬೆಂಗಳೂರು, 09 ಜನವರಿ (ಹಿ.ಸ.) :
ಆ್ಯಂಕರ್ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಮತ್ತೆ ಜಾರಿಗೆ ತರುವಂತೆ ಒತ್ತಾಯಿಸಿ ನಿರ್ಣಯ ಅಂಗೀಕರಿಸಲು ಶೀಘ್ರವೇ ವಿಧಾನ ಮಂಡಲದ ವಿಶೇಷ ಅಧಿವೇಶನವನ್ನು ಕರೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದು ಕೋಟ್ಯಂತರ ಗ್ರಾಮೀಣ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಸುವ ಈ ಯೋಜನೆ ದಲಿತರು, ಮಹಿಳೆಯರು ಹಾಗೂ ರೈತರಿಗೆ ಉದ್ಯೋಗಾವಕಾಶ ನೀಡುವ ಉದ್ದೇಶ ಹೊಂದಿದ್ದು, ವರ್ಷಕ್ಕೆ ನೂರು ದಿನಗಳ ಕಡ್ಡಾಯ ಉದ್ಯೋಗವನ್ನು ಖಚಿತಪಡಿಸಿತ್ತು ಎಂದು ಅವರು ಹೇಳಿದರು.
ಆದರೆ ಇದೀಗ ಕೇಂದ್ರ ಸರ್ಕಾರ ಈ ಯೋಜನೆಯ ಮೂಲ ಅಂಶವನ್ನೇ ದುರ್ಬಲಗೊಳಿಸಿ, ಉದ್ಯೋಗದ ಹಕ್ಕನ್ನೇ ಕಸಿಯುವ ಕೆಲಸ ಮಾಡುತ್ತಿದೆ. ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದು ಗೊಂದಲ ಸೃಷ್ಟಿಸುವ ಹುನ್ನಾರ ನಡೆಯುತ್ತಿದ್ದು, ಇದು ಗಾಂಧೀಜಿಯವರ ಆಲೋಚನೆಗಳಿಗೆ ಮಾಡಿದ ದ್ರೋಹವಾಗಿದ್ದು, “ಮತ್ತೆ ಗಾಂಧಿಯನ್ನು ಕೊಂದಂತೆ” ಆಗಿದೆ ಎಂದು ಸಿದ್ದರಾಮಯ್ಯ ಅವರು ತೀವ್ರವಾಗಿ ಟೀಕಿಸಿದ್ದಾರೆ.
ಯುಪಿಎ ಸರ್ಕಾರ ಜಾರಿಗೆ ತಂದ ಸಂವಿಧಾನಾತ್ಮಕ ಯೋಜನೆಯನ್ನು ರದ್ದುಗೊಳಿಸಿ ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವುದು ಸಂಪೂರ್ಣವಾಗಿ ಸಂವಿಧಾನ ವಿರೋಧಿ ಕ್ರಮವಾಗಿದೆ. ಇದರಿಂದ ದೇಶದ ಸುಮಾರು 28 ಕೋಟಿ ಬಡಜನರಿಗೆ ತೀವ್ರ ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಅನ್ಯಾಯದ ವಿರುದ್ಧ ರಾಜ್ಯ ಸರ್ಕಾರ ತೀವ್ರ ಹೋರಾಟ ನಡೆಸಲಿದೆ. ಬಡವರ ಉದ್ಯೋಗದ ಹಕ್ಕು ಕಸಿದುಕೊಂಡವರಿಗೆ ಪಾಠ ಕಲಿಸುವ ಅಗತ್ಯವಿದೆ. ಬಡವರು ಆರ್ಥಿಕವಾಗಿ ಸಬಲರಾಗುವುದನ್ನು ಸಂಘ ಪರಿವಾರ ಸಹಿಸುವುದಿಲ್ಲ ಎಂಬುದೇ ಈ ದಾಳಿಯ ಹಿಂದಿರುವ ಉದ್ದೇಶ ಎಂದು ಅವರು ಆರೋಪಿಸಿದ್ದಾರೆ.
ಮನರೇಗಾ ಕಾಯಿದೆ ಪುನರ್ಜಾರಿಗೆ ಒತ್ತಾಯಿಸಿ ಜನಾಂದೋಲನ ನಡೆಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ಸದಸ್ಯರು ಮನರೇಗಾ ಕಾರ್ಮಿಕರನ್ನು ನೇರವಾಗಿ ಸಂಪರ್ಕಿಸಬೇಕು. ಈ ವಿಷಯದಲ್ಲಿ ಜನಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ಶಾಸಕರು ಹೊತ್ತುಕೊಳ್ಳಬೇಕು. ನಮ್ಮ ಹೋರಾಟವು ಜನಾಂದೋಲನವಾಗಿ ರೂಪುಗೊಳ್ಳುವ ವಾತಾವರಣ ನಿರ್ಮಿಸಿ, ಮನರೇಗಾ ಯೋಜನೆಯನ್ನು ಉಳಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa