ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ : ಸಿದ್ಧರಾಮಯ್ಯ
ವಿಜಯಪುರ, 09 ಜನವರಿ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಜನರ ಒತ್ತಾಸೆಯಂತೆ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಹಾಗೂ ವಿಜಯಪುರ ನಗರದಲ್ಲಿ 160 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವ
ಸಿಎಂ


ವಿಜಯಪುರ, 09 ಜನವರಿ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ ಜನರ ಒತ್ತಾಸೆಯಂತೆ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆ ಹಾಗೂ ವಿಜಯಪುರ ನಗರದಲ್ಲಿ 160 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭರವಸೆ ನೀಡಿದರು.

ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ವಿಜಯಪುರ ನಗರ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಪ್ರತಿಷ್ಠಾಪಿಸಲಾದ ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರತಿಮೆ ಅನಾವರಣ, ಬಸ್ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ ನಾಮಕರಣ, ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ, ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಅವರು ಮಾತನಾಡಿದರು.

ಈಗಾಗಲೇ ಘೋಷಿಸಿದಂತೆ ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮ ವಹಿಸಲಾಗುವುದು. ರಾಜ್ಯದಲ್ಲಿ 71 ವೈದ್ಯಕೀಯ ಕಾಲೇಜ್‍ಗಳಿವೆ. ಈ ಪೈಕಿ 22 ಸರ್ಕಾರಿ ವೈದ್ಯಕೀಯ ಕಾಲೇಜ್‍ಗಳಿವೆ. ಸರ್ಕಾರಿ ವೈದ್ಯಕೀಯ ಕಾಲೇಜ್‍ಗಳಲ್ಲದ ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‍ಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು. ಇದರೊಂದಿಗೆ ಪ್ರತಿ ಜಿಲ್ಲೆಗಳಲ್ಲಿ ಟ್ರಾಮಾ ಸೆಂಟರ್, ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ 800 ಕ್ಕೂ ಹೆಚ್ಚು ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. 82 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ 730 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ಮಾಡಲಾಗಿದೆ. ರಾಣಿ ಚನ್ನಮ್ಮ ಪ್ರತಿಮೆ ಲೋಕಾರ್ಪಣೆ ಸೇರಿದಂತೆ ಕಿತ್ತೂರು ರಾಣಿ ಚೆನ್ನಮ್ಮ ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಈ ಭಾಗದಲ್ಲಿ ಸೈಕ್ಲಿಸ್ಟ್‍ಗಳಿಗಾಗಿ, ದಕ್ಷಿಣ ಭಾರತದಲ್ಲಿಯೇ ಮೊದಲ ವೆಲೊಡ್ರೋಮ್‍ನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ವಿಜಯುರ ನಗರ ಶಾಸಕರು ಅನೇಕ ಬೇಡಿಕೆಗಳನ್ನು ಇಟ್ಟಿದ್ದು, ಕನಕದಾಸ ವೃತ್ತದಿಂದ ಅಂಬೇಡ್ಕರ್ ಹಾಗೂ ಶಿವಾಜಿ ವೃತ್ತದವರೆಗೆ 160 ಕೋಟಿ ವೆಚ್ಚದ ಮೂರು ಕಿಮೀ ಮೇಲ್ಸೇತುವೆ ಮಾಡಬೇಕೆಂದು ಮನವಿ ಮಾಡಿದ್ದು ಅದನ್ನು ನೆರವೇರಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.

ಜನಾರ್ಶೀವಾದದಿಂದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಸಾಧ್ಯ :

ಮಾಜಿ ದಿ. ಮುಖ್ಯಮಂತ್ರಿ ದೇವರಾಜ ಅರಸು ಅವರ 7 ವರ್ಷ 239 ದಿನಗಳ ಸುದೀರ್ಘ ಅವಧಿಗೆ ಮುಖ್ಯಮಂತ್ರಿ ಆಗಿದ್ದ ದಾಖಲೆಯನ್ನು ಮುರಿದು ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ಎಂಬ ದಾಖಲೆ ಮಾಡಲು ಜನರ ಆಶೀರ್ವಾದದಿಂದ ಸಾಧ್ಯವಾಗಿದೆ. ಅದಕ್ಕಾಗಿ ರಾಜ್ಯದ ಜನತೆಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೃಷ್ಣ ಜಲಭಾಗ್ಯ ನಿಗಮದಲ್ಲಿ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆದ್ಯತೆ ನೀಡಲಾಗಿದೆ. ನಾನು ಸಚಿವನಾದ ಬಳಿಕ 3,700 ಕೋಟಿ ಕೆಲಸವನ್ನು ಈ ಜಿಲ್ಲೆಗೆ ಮಂಜೂರು ಮಾಡಿದ್ದೇವೆ. 1.19 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸಲ್ಲಿಸಲಾಗಿದೆ. ಯುಕೆಪಿ 3ನೇ ಹಂತದಲ್ಲಿ ನಿಮಗೆ 80 ಟಿಎಂಸಿ ನೀರು ಲಭ್ಯವಾಗುತ್ತದೆ. ಈ ಯೋಜನೆಗೆ ಅಧಿಸೂಚನೆ ಹೊರಡಿಸಿ ಎಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುತ್ತಿಲ್ಲ. ನೆರೆ ರಾಜ್ಯಗಳು ನಮ್ಮ ಮೇಲೆ ದಾವೆ ಹೂಡಿ ಅಡ್ಡಪಡಿಸುತ್ತಿವೆ. ಆದರೂ ಕೆರೆಗಳನ್ನು ತುಂಬಿಸುವ ಮೂಲಕ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಭಾಗದಲ್ಲಿ 21 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಯುಕೆಪಿ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಘೋಷಿಸಿದ್ದೇವೆ. ಕಳೆದ ಬಿಜೆಪಿ ಸರ್ಕಾರ ಈ ಭಾಗದ ರೈತರಿಗೆ 20-25 ಲಕ್ಷ ಪ್ರತಿ ಎಕರೆಗೆ ಪರಿಹಾರ ನೀಡಲು ನಿರ್ಧರಿಸಿತ್ತು. 1,33,867 ಎಕರೆ ಮುಳುಗಡೆಯಾಗಲಿದ್ದು, ನಮ್ಮ ಸರ್ಕಾರ ಪ್ರತಿ ಎಕರೆಗೆ 30-40 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದು, ಇದಕ್ಕಾಗಿ 70 ಸಾವಿರ ಕೋಟಿ ವಿತರಣೆ ಮಾಡಲಾಗುವುದು. ಇನ್ನು ಕಾಲುವೆ ಭೂ ಸಂತ್ರಸ್ಥರಿಗೆ 25-30 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತಂದು, ರೈತರಿಗೆ ಶಕ್ತಿ ತುಂಬಲು ಈ ಕೃಷ್ಣ ಯೋಜನೆ ಜಾರಿಗೆ ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

ರೈತರಿಗೆ ಮನವಿ : ಈ ಭಾಗದ ಅನೇಕ ರೈತರು ಹೆಚ್ಚಿನ ಪರಿಹಾರ ಪಡೆಯಲು ನ್ಯಾಯಾಲಯ ಮೇಟ್ಟಿಲೇರಿದ್ದು, ನಿಮಗೆ ಹೆಚ್ಚಿನ ಪರಿಹಾರ ಸಿಗಲಿದೆ ಎಂದು ಭಾವಿಸಿದ್ದೀರಿ. ಅದು ಸಾಧ್ಯವಿಲ್ಲ. ಕೋಟಿಗಟ್ಟಲೆ ಪರಿಹಾರ ನೀಡಬೇಕಾದರೆ, ಯಾವುದೇ ಸರ್ಕಾರ ಈ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ. ಒಪ್ಪಿತ ಭೂಸ್ವಾಧೀನ ಪ್ರಕ್ರಿಯೆ ಮಾಡಬೇಕು ಎಂದು ನಿಮ್ಮ ನಾಯಕರ ಒತ್ತಡದ ಮೇರೆಗೆ ಸರ್ಕಾರದ ಮೇಲೆ ಆರ್ಥಿಕ ಹೊರೆ ಬಿದ್ದರೂ ನಾವು ಈ ತೀರ್ಮಾನ ಮಾಡಿದ್ದೇವೆ. ನೀವೆಲ್ಲರೂ ಸರ್ಕಾರದ ಪರಿಹಾರ ಪಡೆದು ಭೂಮಿಯನ್ನು ನೀಡಬೇಕು ಎಂದು ಮನವಿ ಮಾಡಿದರು.

ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಮೇಲೆ ಕೆಲಸ : ವಿಜಯಪುರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ಅವರ ಹೆಸರು, ದೇವರಹಿಪ್ಪರಗಿಯಲ್ಲಿ ಮಡಿವಾಳ ಮಾಚಯ್ಯ ಅವರ ಹೆಸರು, ಸುರಪುರದಲ್ಲಿ ರಾಜ ವೆಂಕಟಪ್ಪ ನಾಯಕ ಅವರ ಹೆಸರಿಡಲಾಗಿದೆ. ಸಿಂದಗಿಯಲ್ಲಿ ಚನ್ನವೀರ ಸ್ವಾಮೀಜಿ ಅವರ ಹೆಸರು ಇಡಲಾಗಿದೆ. ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.

ಗುಣಮಟ್ಟದ ಶಿಕ್ಷಣ, ಉದ್ಯೋಗ ಸೃಷ್ಟಿಗೆ ಆದ್ಯತೆ : ಸರ್ಕಾರ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಿದೆ. ಸಚಿವರಾದ ಎಂ.ಬಿ ಪಾಟೀಲ್ ಅವರ ನೇತೃತ್ವದಲ್ಲಿ ರಾಜ್ಯಕ್ಕೆ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಬರಬೇಕು ಎಂದು ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮಗುಣ ಮಟ್ಟದ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ. ನಮ್ಮ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ 1 ಲಕ್ಷದಷ್ಟು ವೈದ್ಯರು, ನರ್ಸ್‍ಗಳು ತಯಾರಾಗುತ್ತಿದ್ದು, ಒಂದೂವರೆ ಲಕ್ಷ ಇಂಜಿನಿಯರ್ ಗಳು ಪ್ರತಿ ವರ್ಷ ತಯಾರಾಗುತ್ತಿದ್ದಾರೆ. ನಮ್ಮ ರಾಜ್ಯದ ಸಿಎಸ್‍ಆರ್ ನಿಧಿಯನ್ನು ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಾಲೆಗಳ ನಿರ್ಮಾಣಕ್ಕೆ ಮೀಸಲಿಡಲಾಗುತ್ತಿದೆ. ಪ್ರತಿ 2-3 ಪಂಚಾಯ್ತಿಗೆ ಒಂದು ಕೆಪಿಎಸ್ ಶಾಲೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಮಾತನಾಡಿ, ವೀರರಾಣಿ ಕಿತ್ತೂರ ಚೆನ್ನಮ್ಮ ಪ್ರತಿಮೆ ಅನಾವರಣ, ಬಸ್ ನಿಲ್ದಾಣಕ್ಕೆ ಕಿತ್ತೂರ ರಾಣಿ ಚೆನ್ನಮ್ಮ ನಾಮಕರಣ ಮಾಡುವ ಮೂಲಕ ವೀರರಾಣಿ ಕಿತ್ತೂರಾಣಿ ಚೆನ್ನಮ್ಮ ಅವರನ್ನು ಗೌರವ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಹಿಂದಿನ ಅವಧಿಯಲ್ಲಿ ಕಿತ್ತೂರಾಣಿ ಚೆನ್ನಮ್ಮ ಮೂರ್ತಿ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿದ್ದರು. ಇಂದು ಅವರೇ ಮೂರ್ತಿ ಅನಾವರಣಗೊಳಿಸುತ್ತಿರುವುದು ಅತ್ಯಂತ ಸೌಭಾಗ್ಯವಾಗಿದೆ ಎಂದು ಅವರು ಹೇಳಿದರು.

ಇದರೊಂದಿಗೆ ಜಿಲ್ಲೆಯಲ್ಲಿ 870.88 ಕೋಟಿ ರೂ. ವೆಚ್ಚದ ವಿವಿಧ 24 ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ್ದೇ ಅಭಿವೃದ್ದಿ ಪರ ಸರ್ಕಾರಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯ ಎರಡು ದಶಕಗಳ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಿರ್ಮಿಸಲಾದ ಸೈಕ್ಲಿಂಗ್ ವೆಲೋಡ್ರೋಮ್ ಉದ್ಘಾಟನೆ ನೆರವೇರಿಸಲಾಗಿದ್ದು, ಇದರಿಂದ ಸೈಕ್ಲಿಸ್ಟ್ ಕ್ರೀಡಾಪಟುಗಳು ರಾಷ್ಟ್ರ-ಅಂತರರಾಷ್ಟ್ರ ಮಟ್ಟದಲ್ಲಿ ಸಾಧನೆಗೈಯಲು ಅನುಕೂಲವಾಗಲಿದೆ. ಒಟ್ಟಾರೆ ಜಿಲ್ಲೆಯ ಅಭಿವೃದ್ದಿಗೆ 800 ಕೋಟಿ ರೂ.ಗೂ ಹೆಚ್ಚಿನ ಅನುದಾನ ಒದಗಿಸಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಅತ್ಯಂತ ದೀರ್ಘಾವಧಿಯ ಮುಖ್ಯಮಂತ್ರಿಗೆ ಪಾತ್ರರಾದ ಸಾಮಾಜಿಕ ನ್ಯಾಯ ಹೊಂದಿದ ಬದ್ಧತೆಯ ನಾಯಕರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಲ್ಲ ಸಮಾಜ-ವರ್ಗಕ್ಕೆ ಸಾಮಾಜಿಕವಾಗಿ ನ್ಯಾಯ ಒದಗಿಸುವ ಅಪರೂಪದ ಜನನಾಯಕ. 1983ರಲ್ಲಿ ಮೊದಲನೇ ಬಾರಿ ಶಾಸಕರಾದ ಇವರು 8 ಬಾರಿ ಆಯ್ಕೆಯಾಗಿದ್ದಾರೆ. 1996 ಹಾಗೂ 2004ರಲ್ಲಿ ಉಪಮುಖ್ಯಮಂತ್ರಿಗಳಾಗಿ, 16 ಬಾರಿ ಬಜೆಟ್ ಮಂಡಿಸುವ ಮೂಲಕ ರಾಜ್ಯ ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಶ್ರಮಿಸಿದ ಮುಖ್ಯಮಂತ್ರಿಗಳು, ಬಸವಣ್ಣನವರನ್ನು ಸಾಂಸ್ಕøತಿಕ ನಾಯಕರೆಂದು ಘೋಷಣೆ ಮಾಡುವ ಮೂಲಕ ಶರಣ ಆಶಯದಂತೆ ನಡೆಯುತ್ತ, ನುಡಿದಂತೆ ನಡೆಯುವ ಮೂಲಕ ಅಭಿವೃದ್ದಿ ಹೊಂದಿದ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಮಾತನಾಡಿ, ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಬರುವ ಬಜೆಟ್‍ನಲ್ಲಿ ಕಾಲೇಜು ಆರಂಭಕ್ಕೆ ಪೂರ್ಣ ಪ್ರಮಾಣದ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಮಾಡಿದ ಅವರು, ಅಖಂಡ ವಿಜಯಪುರ ಜಿಲ್ಲೆಯ ಜನರು ಕೃμÁ್ಣ ಮೇಲ್ದಂಡೆ ಯೋಜನೆ ಮೂಲಕ ನಮ್ಮ ಜಿಲ್ಲೆ ಸಮಗ್ರ ನೀರಾವರಿ ಹೊಂದಬೇಕೆಂಬ ಆಶಯ ಹೊಂದಿದ್ದ ನಮ್ಮ ಹಿರಿಯರ ಕನಸು ನನಸಾಗಿಸಲು ಜಲಸಂಪನ್ಮೂಲ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಜಾತ್ಯತೀತ ಮನೋಭಾವದಿಂದ ಹೋರಾಟ ನಡೆಸಿದ ಕಿತ್ತೂರು ರಾಣಿ ಚನ್ನಮ್ಮ ಅವರೊಂದಿಗೆ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕೆಚ್ಚೆದೆಯ ಹೋರಾಟವೂ ಸ್ಮರಣೀಯ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ವಿಶ್ವಗುರು ಬಸವಣ್ಣನವರ ಬೆಳ್ಳಿ ಮೂರ್ತಿ ನೀಡುವ ಮೂಲಕ ವಿಶೇಷವಾಗಿ ಸನ್ಮಾನಿಸಲಾಯಿತು.

ಕಿತ್ತೂರು ರಾಣಿ ಚೆನ್ನಮ್ಮರ ವಂಶಸ್ಥರಾದ ಶ್ರೀಮಂತ ಮಹಾಂತರಾವ ದೇಶಮುಖ ಹಾಗೂ ಮೂರ್ತಿ ಸ್ಥಾಪನೆಗೆ ಶ್ರಮಿಸಿದ ಸವನಳ್ಳಿ ಶಂಕರಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಹರಿಹರ ಪೀಠದ ವಚನಾನಂದ ಶ್ರೀಗಳು ಆಶೀರ್ವಚನ ನೀಡಿದರು.

ಜಿಲ್ಲಾಧಿಕಾರಿ ಡಾ.ಆನಂದ ಕೆ. ಸ್ವಾಗತಿಸಿದರು. ನಗರ ಶಾಸಕರಾದ ಬಸನಗೌಡ ಆರ್. ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ, ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್. ಸಿ. ಮಹದೇವಪ್ಪ, ನಗರಾಭಿವೃದ್ಧಿ ಮತ್ತು ನಗರ ಯೋಜನೆ (ಕೆಯುಡಬ್ಲ್ಯೂಎಸ್ ಡಿಬಿ/ಕೆಯುಐಡಿಎಫ್‍ಸಿ) ಸಚಿವರಾದ ಸುರೇಶ.ಬಿ.ಎಸ್ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ-2 ಹಾಗೂ ಶಾಸದಕರಾದ ಪ್ರಕಾಶ ಬಿ. ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟಜೆರ್ಂಟ್‍ನ ಅಧ್ಯಕ್ಷರೂ ಆದ ಶಾಸಕರಾದಅಪ್ಪಾಜಿ ಸಿ.ಎಸ್. ನಾಡಗೌಡ, ಶಾಸಕರಾದ ಯಶವಂತರಾಯಗೌಡ ವಿ ಪಾಟೀಲ,ಸುನೀಲಗೌಡ.ಬಿ. ಪಾಟೀಲ, ವಿಠ್ಠಲ ಕಟಕಧೋಂಡ, ಅಶೋಕ ಮನಗೂಳಿ, ಕೌಶಲ್ಯಾಭಿವೃದ್ಧಿ ನಿಗಮ ಅಧ್ಯಕ್ಷರಾದ ಶ್ರೀಮತಿ ಕಾಂತಾ ನಾಯ್ಕ, ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಬಿ. ಎಸ್. ಕವಲಗಿ, ಮಹಾನಗರ ಪಾಲಿಕೆ ಮಹಾಪೌರರಾದ ಮಡಿವಾಳಪ್ಪ ಸಿದ್ಧರಾಮಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಕನಾನ್ ಮುಶ್ರೀಫ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿ ಅಧ್ಯಕ್ಷರಾದ ಇಲಿಯಾಸ ಬೋರಾಮಣಿ, ಸಂಗನಬಸವ ಸ್ವಾಮಿಗಳು ಹಾಗೂ ಯೋಗೇಶ್ವರಿ ಮಾತಾಜಿ ಸೇರಿದಂತೆ ಹಿರಿಯ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande