
ಹಾಸನ, 08 ಜನವರಿ (ಹಿ.ಸ.) :
ಆ್ಯಂಕರ್ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹಾಸನ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ 2025ರ ಮತದಾರರ ಪಟ್ಟಿಯನ್ನು 2002ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ತಿಳಿಸಿದ್ದಾರೆ.
ಮತದಾರರ ಪಟ್ಟಿ ಮ್ಯಾಪಿಂಗ್ ಎಂಬುದು ಪ್ರಸ್ತುತ ಸಾಲಿನ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಯ ಭಾಗವಾಗಿದ್ದು, 2002ರಲ್ಲಿ ನಡೆದ ಸಮಗ್ರ ಪರಿಷ್ಕರಣೆಯಲ್ಲಿದ್ದ ಮತದಾರರ ವಿವರಗಳೊಂದಿಗೆ 2025ರ ಪಟ್ಟಿಯಲ್ಲಿನ ಮತದಾರರ ಮಾಹಿತಿಯನ್ನು ಹೊಂದಾಣಿಕೆ ಮಾಡುವ ಪ್ರಕ್ರಿಯೆಯಾಗಿದೆ. ಇದರಲ್ಲಿ 2002ರ ಪಟ್ಟಿಯಲ್ಲಿ ಹೆಸರು ಹೊಂದಿದ್ದ ಮತದಾರರು ಹಾಗೂ ಅವರ ಕುಟುಂಬದ ಸಂತತಿ — ಮಗ, ಮಗಳು, ಮೊಮ್ಮಗ ಅಥವಾ ಮೊಮ್ಮಗಳು — ಇವರ ವಿವರಗಳನ್ನು ಪರಿಶೀಲಿಸಿ ಮ್ಯಾಪಿಂಗ್ ಮಾಡಲಾಗುತ್ತಿದೆ.
ಈ ಕಾರ್ಯವನ್ನು ಪ್ರತಿ ಮತಗಟ್ಟೆಗೆ ನೇಮಕಗೊಂಡಿರುವ ಮತಗಟ್ಟೆ ಮಟ್ಟದ ಅಧಿಕಾರಿಗಳು ಭಾರತ ಚುನಾವಣಾ ಆಯೋಗ ಅಭಿವೃದ್ಧಿಪಡಿಸಿರುವ ತಂತ್ರಾಂಶವನ್ನು ಬಳಸಿ ನಿರ್ವಹಿಸುತ್ತಿದ್ದಾರೆ. ಮ್ಯಾಪಿಂಗ್‌ಗೆ ಒಳಪಟ್ಟ ಮತದಾರರು ಮನೆಮನೆ ಭೇಟಿ ನೀಡುವ ವೇಳೆ ಅಧಿಕಾರಿಗಳಿಗೆ ಅಗತ್ಯ ಮಾಹಿತಿಯನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಮ್ಯಾಪಿಂಗ್ ಕಾರ್ಯಕ್ಕೆ ಸ್ಪಂದಿಸದ ಅಥವಾ ಮಾಹಿತಿ ನೀಡದ ಮತದಾರರು, ಮುಂಬರುವ ಮತದಾರರ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಭಾರತ ಪ್ರಜೆ ಎಂಬುದನ್ನು ಸಾಬೀತುಪಡಿಸಲು ಆಯೋಗ ನಿಗದಿಪಡಿಸಿರುವ 11 ಬಗೆಯ ದಾಖಲೆಗಳ ಪೈಕಿ ಒಂದನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಹಾಸನ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಮ್ಯಾಪಿಂಗ್ ಕಾರ್ಯ ಮುಂದುವರಿದಿದ್ದು, ಸಾರ್ವಜನಿಕರು ತಮ್ಮ ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಬೇಕು ಅಥವಾ ಅಧಿಕಾರಿಗಳು ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa