
ಬೆಂಗಳೂರು, 08 ಜನವರಿ (ಹಿ.ಸ.) :
ಆ್ಯಂಕರ್ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಚಿತ್ರದ ಮೇಲೆ ಸಿನಿಪ್ರೇಮಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಮಲಯಾಳಂ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನದ ಈ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದ್ದು, ಅದಕ್ಕೂ ಮುನ್ನ ಬಿಡುಗಡೆಯಾದ ಟೀಸರ್ ಗಮನ ಸೆಳೆದಿದೆ.
ಯಶ್ ಅವರ ಜನ್ಮದಿನದ ಪ್ರಯುಕ್ತ ಇಂದು ಬೆಳಿಗ್ಗೆ ಸರಿ 10 ಗಂಟೆ 10 ನಿಮಿಷಕ್ಕೆ ಟೀಸರ್ ರಿಲೀಸ್ ಆಗಿದ್ದು, ಸಿನಿಮಾದ ಶೈಲಿ ಮತ್ತು ವಿಷಯದ ಬಗ್ಗೆ ಸ್ಪಷ್ಟ ಸೂಚನೆ ನೀಡಿದೆ. ಹಾಲಿವುಡ್ ಶೈಲಿಯ ಮೇಕಿಂಗ್, ಬೋಲ್ಡ್ ಟ್ರೀಟ್‌ಮೆಂಟ್ ಮತ್ತು ಮಾಸ್ ಆ್ಯಕ್ಷನ್ ದೃಶ್ಯಗಳು ಟೀಸರ್‌ನ ಪ್ರಮುಖ ಆಕರ್ಷಣೆಯಾಗಿವೆ. ಆರಂಭದಲ್ಲೇ ಗಮನ ಸೆಳೆಯುವ ಹಸಿಬಿಸಿ ದೃಶ್ಯಗಳು, ರೆಟ್ರೋ ಟಚ್‌ನ ದೃಶ್ಯಾವಳಿ ಮತ್ತು ಶಕ್ತಿಯುತ ಬ್ಯಾಕ್‌ಗ್ರೌಂಡ್ ಸ್ಕೋರ್ ಟೀಸರ್‌ಗೆ ವಿಭಿನ್ನ ಛಾಪು ನೀಡಿದ್ದಾರೆ.
ಇದಕ್ಕೂ ಮುನ್ನ ಚಿತ್ರತಂಡ ಯಶ್ ಅವರ ಪೋಸ್ಟರ್ ಬಿಡುಗಡೆ ಮಾಡಿದ್ದು, ನಂತರ ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲಾ ನಾಯಕಿಯರ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಪ್ರಚಾರಕ್ಕೆ ವೇಗ ನೀಡಿತ್ತು. ಈಗ ಟೀಸರ್ ರಿಲೀಸ್ ಮೂಲಕ ‘ಟಾಕ್ಸಿಕ್’ ಪ್ರಚಾರಕ್ಕೆ ಅಧಿಕೃತ ಮುನ್ನುಡಿ ಬರೆದಿದೆ.
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡಿರುವ ಈ ಚಿತ್ರ ದೊಡ್ಡ ಬಜೆಟ್‌ನೊಂದಿಗೆ ನಿರ್ಮಾಣವಾಗಿದ್ದು, ಟೀಸರ್‌ನಲ್ಲೇ ಅದರ ಅದ್ದೂರಿತನ ಸ್ಪಷ್ಟವಾಗಿ ಕಾಣಿಸುತ್ತದೆ. ರೆಟ್ರೋ ಶೈಲಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾಕ್ಕೆ ಗೀತು ಮೋಹನ್‌ದಾಸ್ ಅವರೊಂದಿಗೆ ಯಶ್ ಕೂಡ ಕಥೆ ಬರವಣಿಗೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ವಿಶೇಷ.
ಆದರೆ ‘ಟಾಕ್ಸಿಕ್’ಗೆ ಬಾಕ್ಸ್ ಆಫೀಸ್‌ನಲ್ಲಿ ಕಠಿಣ ಸ್ಪರ್ಧೆ ಎದುರಾಗಲಿದೆ. ಈಗಾಗಲೇ ಹಿಂದಿಯಲ್ಲಿ ಸೂಪರ್ ಹಿಟ್ ಆಗಿರುವ ‘ಧುರಂಧರ್’ ಚಿತ್ರದ ಸೀಕ್ವೆಲ್ ‘ಧುರಂಧರ್ 2’ ಇದೇ ಸಮಯದಲ್ಲಿ ತೆರೆಗೆ ಬರುತ್ತಿರುವುದರಿಂದ, ಎರಡೂ ಚಿತ್ರಗಳ ನಡುವೆ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಈ ಸವಾಲನ್ನು ಸಮರ್ಥವಾಗಿ ಎದುರಿಸಲು ‘ಟಾಕ್ಸಿಕ್’ ತಂಡ ಎಲ್ಲ ರೀತಿಯ ಸಿದ್ಧತೆ ನಡೆಸಿದೆ.
ಒಟ್ಟಾರೆ, ಟೀಸರ್ ಮೂಲಕ ‘ಟಾಕ್ಸಿಕ್’ ವಿಭಿನ್ನ ಅನುಭವ ನೀಡುವ ಸಿನಿಮಾ ಎಂಬ ಭರವಸೆ ಮೂಡಿಸಿದ್ದು, ಮಾರ್ಚ್ 19ರ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa