
ಬೆಂಗಳೂರು, 08 ಜನವರಿ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ನಾಯಕತ್ವದ ಗೊಂದಲದಿಂದ ಸರ್ಕಾರ ಅಸ್ತವ್ಯಸ್ತಗೊಂಡಿದ್ದು, ಇದರ ಪರಿಣಾಮವಾಗಿ ವಿಧಾನ ಸೌಧದಲ್ಲಿ ಬ್ರೋಕರ್‌ಗಳ ಪ್ರಭಾವ ಹೆಚ್ಚಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿ ಎಂದು ಹೇಳಿಕೊಂಡು ಸಂಭ್ರಮದಲ್ಲಿರುವಾಗ, ಇನ್ನೊಂದು ಕಡೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಸೆ ಈಡೇರದ ಕಾರಣ ಅಸಮಾಧಾನದಲ್ಲಿದ್ದಾರೆ. ಈ ಕುರ್ಚಿ ಕಿತ್ತಾಟದ ನಡುವೆಯಲ್ಲಿ ಸಚಿವರು ಗೊಂದಲಕ್ಕೀಡಾಗಿದ್ದು, ಗುರುವಾರದ ಸಚಿವ ಸಂಪುಟ ಸಭೆ ಹೊರತುಪಡಿಸಿ ವಾರಪೂರ್ತಿ ವಿಧಾನ ಸೌಧಕ್ಕೆ ಬಾರದ ಸ್ಥಿತಿ ಉಂಟಾಗಿದೆ ಎಂದು ಅವರು ದೂರಿದರು.
ಅಧಿಕಾರಿಗಳ ಕಾರ್ಯನಿರ್ವಹಣೆಯ ಮೇಲೂ ಈ ಗೊಂದಲ ಪರಿಣಾಮ ಬೀರಿದ್ದು, ಆಡಳಿತ ಸಂಪೂರ್ಣ ಸ್ಥಬ್ಧವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿಧಾನ ಸೌಧ ಬ್ರೋಕರ್‌ಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಆರೂವರೆ ಕೋಟಿ ಕನ್ನಡಿಗರ ಬದುಕಿಗೆ ಬೆಳಕಾಗಬೇಕಿದ್ದ ವಿಧಾನ ಸೌಧ, ಕಾಂಗ್ರೆಸ್ ಸರ್ಕಾರದ ದುರಾಡಳಿತದ, ಭ್ರಷ್ಟಾಚಾರದ ಕೇಂದ್ರವಾಗಿದೆ ಎಂದು ಆರ್. ಅಶೋಕ್ ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಹಾಗೂ ರಾಜ್ಯವನ್ನು ಉಳಿಸಬೇಕು ಎಂದು ಅವರು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa