

ಬಳ್ಳಾರಿ, 07 ಜನವರಿ (ಹಿ.ಸ.) :
ಆ್ಯಂಕರ್ : ಜಾತ್ರೆ, ಹಬ್ಬ ಉತ್ಸವಗಳಲ್ಲಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ವಾಂತಿ-ಭೇದಿ ಪ್ರಕರಣಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದ್ದಾರೆ.
ಸಂಡೂರು ತಾಲ್ಲೂಕಿನ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಡಿ.ಮಲ್ಲಾಪುರ ಉಪಕೇಂದ್ರದ ಅಂಕಮನಹಾಳ್ ಗ್ರಾಮದಲ್ಲಿ ನಡೆಯುವ ಜಾತ್ರಾ ಹಿನ್ನಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ಮುಂಜಾಗ್ರತೆಗಾಗಿ ಊಟದ ಮೊದಲು ಮತ್ತು ನಂತರ ಕೈಗಳನ್ನು ಸಾಬೂನು ನೀರಿನಿಂದ 45 ಸೆಕೆಂಡ್‍ಗಳ ಕಾಲ ತೊಳೆದುಕೊಂಡ ನಂತರ ಆಹಾರ ಸೇವಿಸಿಬೇಕು. ತೆರೆದಿಟ್ಟ ಆಹಾರ, ಹಳೆಯ ಅಥವಾ ಹೆಚ್ಚು ಎಣ್ಣೆಯುಕ್ತ ಪದಾರ್ಥಗಳನ್ನು ತಪ್ಪಿಸಿ ಬಾಟಲ್ ನೀರು ಅಥವಾ ಕುದಿಸಿದ ನೀರನ್ನೇ ಕುಡಿಯಲು ಬಳಸಬೇಕು ಎಂದರು.
ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಬೇಕು. ಮಲ, ಮೂತ್ರ ವಿಸರ್ಜನೆಗಾಗಿ ಶೌಚಾಲಯ ಬಳಸಬೇಕು. ತಂಗಳು ಆಹಾರವನ್ನು ಸೇವಿಸದೇ ಬಿಸಿಯಾದ ಆಹಾರ ಮಾತ್ರ ಸೇವಿಸಿ, ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಬೇಕು. ಮನೆಯ ಸುತ್ತಲೂ ಸ್ವಚ್ಛತೆ ಕಾಪಾಡಿಕೊಂಡು ನೊಣ ಉಂಟಾಗಂದತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸಿದರು.
ಹವಾಮಾನದಿಂದ ರಕ್ಷಣೆ ಹೊಂದಿ: ಬಿಸಿಲು ಹೆಚ್ಚಿದ್ದರೆ ಟೋಪಿ/ಛತ್ರಿ ಬಳಸಿ ಸಾಕಷ್ಟು ನೀರು ಕುಡಿದು ದೇಹದ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಸಮಸ್ಯೆಗಳಿದ್ದರೆ ಅಗತ್ಯ ಔಷಧಿಗಳನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು. ಅಸ್ವಸ್ಥತೆ ಇದ್ದರೆ ವಿಶ್ರಾಂತಿ ತೆಗೆದುಕೊಳ್ಳಬೇಕು ಅಥವಾ ವೈದ್ಯರನ್ನು ಸಂಪರ್ಕಿಬೇಕು. ಜ್ವರ, ಕೆಮ್ಮು ಇದ್ದರೆ ಮಾಸ್ಕ್ ಧರಿಸಿ ಅನಾವಶ್ಯಕವಾಗಿ ಮುಖ ಮುಟ್ಟುವುದನ್ನು ತಪ್ಪಿಸಿ ಎಂದು ಹೇಳಿದರು.
ಜನಸಂದಣಿ ಸುರಕ್ಷತೆ: ಜಾತ್ರೆ ಉತ್ಸವಗಳಲ್ಲಿ ಮಕ್ಕಳನ್ನು ಮತ್ತು ಹಿರಿಯರನ್ನು ಗಮನದಲ್ಲಿಟ್ಟುಕೊಂಡು ಜನಜಂಗುಳಿ ಸ್ಥಳಗಳಲ್ಲಿ ತಳ್ಳಾಟ ತಪ್ಪಿಸಿ ತುರ್ತು ಸಂದರ್ಭಕ್ಕೆ ಸಂಪರ್ಕ ಸಂಖ್ಯೆ ಕೈಯಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಸೇವೆಗಳು ಮತ್ತು ಆರೋಗ್ಯ ಮಾಹಿತಿಯ ಕುರಿತು ಕರ ಪತ್ರಗಳ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ನೀಡಲಾಗುವುದು. ಜಾತ್ರೆಗಳು, ಉತ್ಸವಗಳು ಮತ್ತು ಉರುಸುಗಳು ನಡೆಯುವ ಮುಂಚೆಯೇ ಆ ಪ್ರದೇಶದಲ್ಲಿ ಎಲ್ಲಾ ನೀರಿನ ಮೂಲಗಳ ಮಾದರಿಗಳನ್ನು ಸಂಗ್ರಹಿಸಿ ಜೈವಿಕ ಪರೀಕ್ಷೆಗೆ ಒಳಪಡಿಸಲಾಗುವುದು. ದುರಸ್ಥಿಯಲ್ಲಿರುವ ಶುದ್ಧ ನೀರಿನ ಘಟಕಗಳನ್ನು ಅತೀ ಜರೂರಾಗಿ ಸರಿಪಡಿಸಿ ಗ್ರಾಮದ ಜನತೆಗೆ ಕುಡಿಯಲು ಶುದ್ಧ ಹಾಗೂ ಸ್ವಚ್ಛ ನೀರು ಸರಬರಾಜು ಮಾಡುವುದು. ಓವರ್ ಹೆಡ್ ಟ್ಯಾಂಕ್ ಅಥವಾ ಕೆರೆಯಿಂದ ಗ್ರಾಮಕ್ಕೆ ಸರಬರಾಜು ಆಗುವ ನೀರನ್ನು ಕ್ಲೋರಿನೇಷನ್ ಮಾಡಿದ ನಂತರ ಸರಬರಾಜು ಮಾಡುವಂತೆ ತಿಳಿಸಲಾಗಿದೆ ಎಂದರು.
ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಸ್ವಚ್ಚ ಹಾಗೂ ಶುದ್ಧ ಕ್ಲೋರಿನೇಷನ್ ಮಾಡಿದ ನೀರನ್ನು ನಿಗದಿತ ಸ್ಥಳಗಳಲ್ಲಿ ಟ್ಯಾಂಕರ್ ಗಳ ಮೂಲಕ ಸರಬರಾಜು ಮಾಡಲು ತಿಳಿಸಲಾಗುವುದು. ದೇವಸ್ಥಾನದ ಸುತ್ತ ಮುತ್ತಲಿನ ಆವರಣ ಪರಿಶೀಲನೆ ಮಾಡಿ ಕಸದ ವಿಲೇವಾರಿಗಾಗಿ ಕಸದ ಬುಟ್ಟಿಗಳ ವ್ಯವಸ್ಥೆ ಮಾಡುವ ಮೂಲಕ ನೈರ್ಮಲ್ಯ ಕಾಪಾಡಿಕೊಳ್ಳುವುದರ ಕುರಿತು ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ತಾಲೂಕ ಪಂಚಾಯತ್, ಜಿಲ್ಲಾ ಪಂಚಾಯತಿ ಅಧಿಕಾರಿಗಳು/ಸಿಬ್ಬಂದಿಗಳು ಕ್ರಮ ವಹಿಸುವರು ಎಂದು ಹೇಳಿದರು.
ಜಾತ್ರೆಯಲ್ಲಿ ತೆರೆದಿಟ್ಟ ಸಿಹಿ ಪದಾರ್ಥ, ಕತ್ತರಿಸಿ ತೆರೆದಿಟ್ಟ ಹಣ್ಣುಗಳನ್ನು ಮುಚ್ಚಿಟ್ಟು ಮಾರಾಟ ಮಾಡದಂತೆ ಕ್ರಮ ವಹಿಸಲಾಗಿದೆ. ಜಾತ್ರೆ-ಹಬ್ಬದ ಬಳಿಕ ತ್ಯಾಜ್ಯವನ್ನು ವಿಲೇವಾರಿ ಮಾಡಲು ನಿರ್ದೇಶಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಭರತ್, ಗ್ರಾಮ ಪಂಚಾಯಿತಿಯ ನೀರುಘಂಟಿ ಸೇರಿದಂತೆ ಆಶಾಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್