
ಚಿತ್ರದುರ್ಗ, 07 ಜನವರಿ (ಹಿ.ಸ.) :
ಆ್ಯಂಕರ್ : ರಾಜ್ಯದ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಂಚಿಕೆಯಾಗದೆ ಹಾಗೂ ಸ್ಥಗಿತಗೊಂಡಿರುವ 569 ಮದ್ಯದಂಗಡಿ ಅಬಕಾರಿ ಸನ್ನದುಗಳನ್ನು ಪಾರದರ್ಶಕ ಇ-ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತಿದೆ ಎಂದು ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಿ. ಮಾದೇಶ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಬಕಾರಿ ಇಲಾಖೆ ಆಯೋಜಿಸಿದ್ದ ಇ-ಹರಾಜು ಪ್ರಕ್ರಿಯೆ ಕುರಿತ ಸಾರ್ವಜನಿಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜ.13 ರಿಂದ 20 ರವರೆಗೆ ಭಾರತ ಸರ್ಕಾರದ ಎಂಎಸ್‌ಟಿಸಿ ಲಿಮಿಟೆಡ್‌ನ ಇ-ಪೋರ್ಟಲ್‌ನಲ್ಲಿ ಆನ್‌ಲೈನ್ ಹರಾಜು ನಡೆಯಲಿದೆ ಎಂದು ಹೇಳಿದರು. ಹರಾಜಿನಲ್ಲಿ ಭಾಗವಹಿಸಲು ರೂ.1,000 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಜ.19 ರಂದು ಬೆಳಿಗ್ಗೆ 10 ರಿಂದ 12 ರವರೆಗೆ ಹರಾಜು ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 12 ಸಿಎಲ್-2ಎ (ಚಿಲ್ಲರೆ ಮದ್ಯ ಮಾರಾಟ) ಅಬಕಾರಿ ಸನ್ನದುಗಳು ಲಭ್ಯವಿವೆ ಎಂದು ತಿಳಿಸಿದರು. ಒಂದು ನೋಂದಣಿಯಡಿ ಹಲವು ಸನ್ನದುಗಳಿಗೆ ಅರ್ಜಿ ಸಲ್ಲಿಸಬಹುದಾದರೂ, ಪ್ರತಿ ಅರ್ಜಿಗೆ ರೂ.50,000 ಶುಲ್ಕ ಹಾಗೂ ಸನ್ನದಿನ ಮೂಲಬೆಲೆಯ ಶೇ.2ರಷ್ಟು ಇಎಂಡಿ ಪಾವತಿಸಬೇಕು ಎಂದರು.
ಅಬಕಾರಿ ಉಪ ಆಯುಕ್ತೆ ಡಾ. ಆಶಾಲತಾ ಮಾತನಾಡಿ, ಹೆಚ್ಚುವರಿ ರಾಜಸ್ವ ಸಂಗ್ರಹಣೆ ಮತ್ತು ಪಾರದರ್ಶಕತೆಗಾಗಿ ಇ-ಹರಾಜು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ತರಬೇತಿ ಕಾರ್ಯಕ್ರಮದಲ್ಲಿ ಎಂಎಸ್‌ಟಿಸಿ ತಂಡದ ತಾಂತ್ರಿಕ ತಜ್ಞರು ಮಾಹಿತಿ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa