
ಹಾಸನ, 07 ಜನವರಿ (ಹಿ.ಸ.) :
ಆ್ಯಂಕರ್ : ಹಾಸನದ ವಿಮಾನ ನಿಲ್ದಾಣ ಕಾಮಗಾರಿಗೆ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆ ಶ್ರೀಘ್ರವಾಗಿ ಪೂರ್ಣಗೊಳಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ಹೆದ್ದಾರಿ-206 ಯೋಜನೆಗೆ ಸಂಬಂಧಿಸಿದಂತೆ ಸಭೆ ನಡೆಸಿ ಮಾತನಾಡಿದ ಅವರು, ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಭೂಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ಮೊತ್ತ ಪಾವತಿಸಿ, ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಕೆ.ಐ.ಎ.ಡಿ.ಬಿ. ವತಿಯಿಂದ ಒಟ್ಟು 91 ಎಕರೆ 32 ಗುಂಟೆ ಭೂಸ್ವಾಧೀನಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ರೈತರಿಗೆ ಪರಿಹಾರದ ಮೊತ್ತ ಪಾವತಿಸಲು ಒಟ್ಟು 143.67 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ತ್ವರಿತವಾಗಿ ಕ್ರಮ ವಹಿಸಲಾಗುವುದು ಎಂದರು.
ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇರುವ ಜಮೀನಿಗೆ ಸಂಬಂಧಿಸಿದಂತೆ ದರ ನಿಗದಿ ಸಮಿತಿಯ ಮುಂದಿಟ್ಟು ಕೂಡಲೇ ಸಭೆ ನಡೆಸಿ ದರ ನಿಗದಿಪಡಿಸಿ ಹಾಗೂ ಜಂಟಿ ಸರ್ವೇ ಕಾರ್ಯವನ್ನು ನಡೆಸುವಂತೆ ತಿಳಿಸಿದರು.
ವಿಮಾನ ನಿಲ್ದಾಣ ಕಾಮಗಾರಿಗೆ ಭೂಸ್ವಾಧೀನಪಡಿಸಿಕೊಂಡಿರುವ ಜಮೀನುಗಳಲ್ಲಿ ಹಾದುಹೋಗಿರುವ ಹೈಟೆನ್ಶನ್ ವಿದ್ಯುತ್ ಲೈನ್ ಸ್ಥಳಾಂತರಕ್ಕೆ ತುರ್ತಾಗಿ ಕ್ರಮ ವಹಿಸಲು ಸೂಚಿಸಿದರು.
ಅರಸೀಕೆರೆ ತಾಲ್ಲೂಕಿನ ಬೆಂಡೆಕೆರೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ-206 ಯೋಜನೆಗೆ ಸಂಬಂಧಿಸಿದಂತೆ ರೈತರ ಮನವೊಲಿಸಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಎಸ್.ಲತಾ ಕುಮಾರಿ ಮಾತನಾಡಿ, ಹಾಸನ ವಿಮಾನ ನಿಲ್ದಾಣ ದಕ್ಷಿಣ ಭಾಗದಲ್ಲಿ ದ್ಯಾವಲಾಪುರ ತಂಗಾಡಿಹಳ್ಳಿ ಗ್ರಾಮದ ಸಂಪರ್ಕ ರಸ್ತೆಯನ್ನು ನಿರ್ಮಾಣ ಮಾಡಿಕೊಡುವಂತೆ ಹಾಗೂ ತಾತ್ಕಾಲಿಕವಾಗಿ ಮಣ್ಣಿನ ರಸ್ತೆಯನ್ನು ನಿರ್ಮಾಣ ಮಾಡಿಕೊಡಲು ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ವಿದ್ಯುತ್ ಗೋಪುರ ಹಾದುಹೋಗುವ ಮಾರ್ಗಗಳ ಜಮೀನಿಗೆ ದರ ನಿಗದಿ ಮಾಡಿ ಈಗಾಗಲೇ ಆದೇಶ ಮಾಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಮೈಸೂರು ಕೆ.ಐ.ಎ.ಡಿ.ಬಿ.ಯ ಭೂಸ್ವಾಧೀನಾದಿಕಾರಿ ವೆಂಕಟರಾಜು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ಶ್ರೀನಿಧಿ, ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕರಾದ ಹೇಮಲತಾ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಗಿರೀಶ್ ಮತ್ತಿತರರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa