
ಹುಬ್ಬಳ್ಳಿ, 07 ಜನವರಿ (ಹಿ.ಸ.) :
ಆ್ಯಂಕರ್ : ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯೊಬ್ಬರ ಬಂಧನದ ವೇಳೆ ಪೊಲೀಸರು ಬಟ್ಟೆ ಬಿಚ್ಚಿ ಥಳಿಸಿದ್ದಾರೆ ಎಂಬ ಆರೋಪ ಭಾರಿ ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿನ ಹಳೆಯ ಗಲಾಟೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಹಾನಗರ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 307 ಅಡಿ ಪ್ರಕರಣ ದಾಖಲಾಗಿತ್ತು. ಇದನ್ನಾಧರಿಸಿ ಪೊಲೀಸರು ಮಹಿಳೆಯನ್ನು ಬಂಧಿಸಲು ಮುಂದಾದಾಗ ಪ್ರತಿರೋಧ ತೋರಿದ ವೇಳೆ ಆಕೆಯನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಬಂಧನದ ವೇಳೆ ಅನುಚಿತ ವರ್ತನೆ ನಡೆಸಲಾಗಿದೆ ಎಂದು ಮತ್ತೊಂದು ದೂರು ಸಹ ದಾಖಲಾಗಿದೆ.
ಆದರೆ ಈ ಆರೋಪಗಳನ್ನು ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ತಳ್ಳಿ ಹಾಕಿದ್ದಾರೆ. ಬಂಧನದ ವೇಳೆ ಮಹಿಳೆ ವಿವಸ್ತ್ರಳಾಗಿರಲಿಲ್ಲ, ಪೊಲೀಸ್ ವ್ಯಾನ್ ಹತ್ತಿದ ನಂತರ ಆಕೆಯೇ ಸ್ವಯಂ ಬಟ್ಟೆ ಬಿಚ್ಚಿಕೊಂಡು ಗಲಾಟೆ ಮಾಡಿದ್ದಾಳೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಹಿಳೆಯ ಮೇಲೆ 2020ರಿಂದಲೇ ಹಲವು ಪ್ರಕರಣಗಳು ದಾಖಲಾಗಿದ್ದು, ಈ ವರ್ಷ ಸೇರಿ ಒಟ್ಟು 9 ಪ್ರಕರಣಗಳಿವೆ ಎಂದು ಮಾಹಿತಿ ನೀಡಿದ್ದಾರೆ.
ಮಹಿಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಕೆಲ ಸಿಬ್ಬಂದಿಗೆ ಕಚ್ಚಿ ಗಾಯಗೊಳಿಸಿದ್ದಾಳೆ ಎಂಬುದನ್ನೂ ಆಯುಕ್ತರು ತಿಳಿಸಿದ್ದಾರೆ. ವಿಡಿಯೋ ಯಾರು ಚಿತ್ರೀಕರಿಸಿದ್ದಾರೆ ಎಂಬುದು ತಿಳಿದಿಲ್ಲ, ಆದರೆ ಅದನ್ನು ವೈರಲ್ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಒಟ್ಟಾರೆ, ಮತಪಟ್ಟಿ ಪರಿಷ್ಕರಣೆ ವೇಳೆ ಉಂಟಾದ ರಾಜಕೀಯ ವೈಷಮ್ಯ ಈ ಘಟನೆಗೆ ಹಿನ್ನೆಲೆ ಎನ್ನಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa