
ಗದಗ, 06 ಜನವರಿ (ಹಿ.ಸ.) :
ಆ್ಯಂಕರ್ : ಗದಗ ಬೆಟಗೇರಿ ಅವಳಿ ನಗರದಲ್ಲಿ ನಗರದ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಜನಪರ ವಿಚಾರಗಳಲ್ಲಿ ಅಧಿಕಾರಿಗಳು ಜನರಿಗೆ ಮೂಗಿಗೆ ತುಪ್ಪ ವರೆಸುವ ಕ್ರಮವಹಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಗಂಭೀರವಾಗಿ ಎಚ್ಚರಿಸಿದರು.
ಗದಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ರೀತಿಯ ತಾರತಮ್ಯ ಸಲ್ಲದು ಎಂದು ಸ್ಪಷ್ಟಪಡಿಸಿದರು.
ಅವಳಿ ನಗರದ ನೀರು ಪೂರೈಕೆ ಸಂಬಂಧ ವ್ಯವಸ್ಥಿತವಾಗಿ ಯೋಜನೆ ಕೊಲ್ಲುವ ಪಿತೂರಿ ನಡೆಯುತ್ತಿದೆ. ಅಮೃತ ಯೋಜನೆಯ ಅನುದಾನ ಕೇಂದ್ರ ಸರ್ಕಾರದ್ದು; ಅದನ್ನು ಸದ್ಬಳಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಡವರು ಮತ್ತು ಅರ್ಹರಿಗೆ ಮನೆ ಮಂಜೂರು ಮಾಡುವ ಮನಸ್ಸು ಅಧಿಕಾರಿಗಳಲ್ಲಿ ಇರಬೇಕು. ಮನೆ ಮಂಜೂರು ಮಾಡದಿರುವುದಕ್ಕೆ ನಿಮ್ಮಲ್ಲಿ 101 ಕಾರಣಗಳಿರುತ್ತವೆ, ಆ ಮನೋಭಾವ ಬಿಡಿ ಎಂದರು. ಜೊತೆಗೆ ಪರಿಹಾರ ವಿತರಣೆಯಲ್ಲೂ ತಾರತಮ್ಯ ನಡೆದಿದೆ ಎಂಬ ದೂರುಗಳು ಕೇಳಿ ಬರುತ್ತಿರುವುದನ್ನು ಸಭೆಯ ಗಮನಕ್ಕೆ ತಂದರು.
ಪಿಎಂ ಕುಸುಮ್–ಬಿ ಯೋಜನೆ ಕುರಿತು ಇಂಧನ ಇಲಾಖೆಯೊಂದಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಒಟ್ಟಾಗಿ ರೈತರಿಗೆ ಸಮಗ್ರ ಅರಿವು ಮೂಡಿಸಬೇಕು ಎಂದು ಸೂಚಿಸಿದರು. ಜೊತೆಗೆ ಜೆ ರಾಮ್ ಜಿ ಹೊಸ ಯೋಜನೆಯ ಬದಲಾವಣೆಗಳು ಹಾಗೂ ಅನುಷ್ಠಾನ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಜಲ ಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ನೀರು ತಲುಪುವಂತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು. ಅಧಿಕಾರಿಗಳು ಸಭೆಗೆ ತಪ್ಪು ಮಾಹಿತಿ ನೀಡದೇ, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಕುರಿತು ಸಹ ಚರ್ಚೆ ನಡೆಯಿತು. ಜೊತೆಗೆ ವಿವೇಕ ಶಾಲಾ ಕೊಠಡಿ ಯೋಜನೆಯಡಿ ರಾಜ್ಯದಲ್ಲಿ ಪ್ರತಿ ವರ್ಷ 9 ಸಾವಿರ ಕೊಠಡಿಗಳ ನಿರ್ಮಾಣ ಗುರಿ ನಿಗದಿಯಾಗಿದ್ದು, ಪ್ರಗತಿ ಕುರಿತು ಚರ್ಚಿಸಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ನೇರವಾಗಿ ಜನಸಾಮಾನ್ಯರಿಗೆ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಬೊಮ್ಮಾಯಿ ಹೇಳಿದರು.
ಕೇಂದ್ರ ಸರ್ಕಾರವು ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ರಸ್ತೆ, ವಸತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜನಹಿತದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ಯಾವುದೇ ವಿಳಂಬ, ನಿರ್ಲಕ್ಷ್ಯ ಅಥವಾ ಅಸಡ್ಡೆಗೆ ಅವಕಾಶ ನೀಡಬಾರದು ಎಂದು ಸಂಸದರು ತಿಳಿಸಿದರು.
ಪಡಿತರ ಅಕ್ಕಿ ಗದಗ ಜಿಲ್ಲೆಯಿಂದ ಗಂಗಾವತಿ ಮೂಲಕ ಆಂಧ್ರ ಪ್ರದೇಶಕ್ಕೆ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಉಲ್ಲೇಖಿಸಿದ ಅವರು, ಇದನ್ನು ಅಧಿಕಾರಿಗಳು ಹಿಡಿಯದೇ ಇದ್ದರೆ ಅವರ ಕಣ್ಣು ತಪ್ಪಿಸಿದೆ ಅಥವಾ ಅವರೇ ಇದರಲ್ಲಿ ಭಾಗಿಯಾಗಿದ್ದಾರೆ ಎಂಬರ್ಥ ಎಂದು ತೀವ್ರ ಎಚ್ಚರಿಕೆ ನೀಡಿದರು.
ಶಾಲೆಗಳ ರಕ್ಷಣೆಗೆ ಪಂಚಾಯತ್–ಪೊಲೀಸ್ ಸಹಕಾರ
ಶಾಲೆ ಎಂಬುದು ಪವಿತ್ರ ಸ್ಥಳ ಎಂದು ಹೇಳಿದ ಸಂಸದರು, ಶಾಲೆಗಳಿಗೆ ಕಾಪೌಂಡ್ ನಿರ್ಮಿಸಿ ಅಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಬೇಕು. ಈ ಕಾರ್ಯಕ್ಕೆ ಗ್ರಾಮ ಪಂಚಾಯತ್ ಹಾಗೂ ಪೊಲೀಸ್ ಇಲಾಖೆ ಸಹಯೋಗ ಪಡೆಯುವಂತೆ ಸೂಚಿಸಿದರು. ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಿ ಕಾಮಗಾರಿ ಕೈಗೊಳ್ಳಬೇಕೆಂದು ತಿಳಿಸಿದರು.
ಶಾಸಕ ಸಿಸಿ ಪಾಟೀಲ ಮಾತನಾಡಿ ಜಿಲ್ಲೆಯಲ್ಲಿ ಕಳ್ಳಸಂತೆಯಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂದಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳ ಫಲಾನುಭವಿಗಳ ಪಟ್ಟಿ ಒದಗಿಸಬೇಕು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಕುರಿತು ವ್ಯಾಪಕ ಪ್ರಚಾರ ಕೈಕೊಳ್ಳಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಸಂಬಂದಿತ ಮಾಹಿತಿಯನ್ನು ಸಭೆಗೆ ತರಬೇಕು ಎಂದರು
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ ಜಿಲ್ಲೆಯ ಕೆಲವೊಂದು ಶಾಲಾ ಆವರಣಗಳಲ್ಲಿ ಸಾರಾಯಿ ಬಾಟಲಿಗಳು ಬಿದ್ದಿರುವುದು ಕಂಡುಬರುತ್ತಿವೆ. ಎಲ್ಲ ಶಾಲೆಗಳಲ್ಲಿ ಸಿಸಿಟಿವಿ ಅಳವಡಿಸಲು ಕ್ರಮ ವಹಿಸಬೇಕು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ ಜೆಜೆಎಂ ಅಡಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಳ್ಳಬೇಕಾದರೆ ಗ್ರಾಮದ ಪ್ರತಿ ಮನೆಗೂ ನೀರು ತಲುಪಬೇಕು. ಆದರೆ ಈವರೆಗೂ ಕೇವಲ ಪೈಪ್ ಲೈನ್ ಅಳವಡಿಕೆ ಸೇರಿದಂತೆ ಇತರೆ ಕಾರ್ಯಗಳನ್ನಷ್ಟೇ ಮಾಡುವ ಮೂಲಕ ಜೆಜೆಂ ಯೋಜನೆ ಸಂಪೂರ್ಣ ಯಶಸ್ವಿಯಾಗಿಲ್ಲ. ನೀರು ಮನೆ ಬಾಗಿಲಿಗೆ ತಲುಪಿದಾಗಷ್ಟೇ ಯೋಜನೆಯ ಸದ್ಭಳಕೆಯಾದಂತಾಗುತ್ತದೆ ಎಂದರು.
ಸಭೆಗೆ ಈ ಕೆಳಕಂಡಂತೆ ಸಂಬಂಧಿತ ಇಲಾಖಾಧಿಕಾರಿಗಳು ಮಾಹಿತಿ ಒದಗಿಸಿದರು.
ಅವಳಿ ನಗರಕ್ಕೆ ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಪೈಪ್ ಲೈನ್ ಸೋರಿಕೆ ಸೇರಿದಂತೆ ಕಾಮಗಾರಿಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಟಾನಗೊಳಿಸಲು 42 ಕೋಟಿ ರೂ.ಗಳ ಡಿಪಿಆರ್ ತಯಾರಿಸಲಾಗುತ್ತಿದೆ
2015 ರಿಂದ 2022 ರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರ ( ರಾಜ್ಯ ಮತ್ತು ಕೇಂದ್ರ ಅನುದಾನ) ಜಿಲ್ಲೆಯಲ್ಲಿ 5138 ಮನೆಗಳು ಪೂರ್ಣಗೊಂಡಿದ್ದು 181 ಮನೆಗಳು ಫೌಂಡೇಶನ್ ಹಂತದಲ್ಲಿ, 130 ಲಿಂಟಲ್ ಲೆವೆಲ್ , 67 ಮನೆಗಳು ರೂಫ್ ಲೆವೆಲ್ ದಲ್ಲಿ ಪ್ರಗತಿಯಲ್ಲಿವೆ. ಎಂದರು.
ಸ್ವಚ್ಛ ಭಾರತ ಮಿಷನ್ದಡಿ 70 ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದ್ದು ಆ ಪೈಕಿ 39 ಕಾಮಗಾರಿಗಳು ಪೂರ್ಣಗೊಂಡಿದ್ದು 18 ಕಾಮಗಾರಿಗಳು ಪ್ರಗತಿಯಲ್ಲಿವೆ. 13 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ. 15 ನೇ ಹಣಕಾಸು ಯೋಜನೆಯಡಿ 697 ಕಾಮಗಾರಿಗಳು ಮಂಜೂರಾಗಿದ್ದು 573 ಕಾಮಗಾರಿಗಳು ಪೂರ್ಣಗೊಂಡಿವೆ. 124 ಕಾಮಗಾರಿಗಳು ಪ್ರಗತಿಯಲ್ಲಿವೆ.
ಮನರೇಗಾ ಯೊಜನೆಯಡಿ 2025-26 ನೇ ಸಾಲಿನಲ್ಲಿ 1-1-2026 ರವರೆಗೆ 12.62 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು 54.216 ಕೋಟಿ ರೂ. ವೆಚ್ಚ ಮಾಡಲಾಗಿದೆ. 2025-26 ನೇ ಸಾಲಿನಲ್ಲಿ 469 ಸಿವಿಲ್ ಕಾಮಗಾರಿಗಳು ಪ್ರಗತಿಯಲ್ಲಿದ್ದು 332 ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ .
2025-26 ನೇ ಸಾಲಿನ ಸಾಮಾಜಿಕ ಭದ್ರತಾ ಯೋಜನೆಯ (ಕೇಂದ್ರ ಪುರಸ್ಕೃತ ಯೋಜನೆ) ಜಿಲ್ಲೆಯಲ್ಲಿ ದಿ: 31-12- 2025 ರ ಅಂತ್ಯಕ್ಕೆ 50798 ಫಲಾನುಭವಿಗಳು ವೃದ್ಧಾಪ್ಯ ವೇತನ, 40298 ಫಲಾನುಭವಿಗಳು ವಿಧವಾ ವೇತನ, 25189 ಫಲಾನುಭವಿಗಳು ಅಂಗವಿಕಲ ವೇತನದ ಸೌಲಭ್ಯ ಪಡೆದಿರುತ್ತಾರೆ. ಜಿಲ್ಲೆಯಲ್ಲಿ ಡಿಸೆಂಬರ್ -2025 ರ ಅಂತ್ಯಕ್ಕೆ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಯೋಜನೆಗಳಡಿ 148476 ಫಲಾನುಭವಿಗಳು ಸೌಲಭ್ಯ ಪಡೆದಿರುತ್ತಾರೆ.
ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಉಜ್ವಲ ಹಂತ 1 ರಿಂದ 3 ರವರೆಗೆ ಒಟ್ಟು 1,10,085 ಉಜ್ವಲ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು ಅದರಲ್ಲಿ 1,08,622 ಫಲಾನುಭವಿಗಳಿಗೆ ಗ್ಯಾಸ್ ಕನೆಕ್ಷನ್ ಪೂರೈಸಿದ್ದು, 1,463 ಗ್ಯಾಸ್ ಕನೆಕ್ಷನ್ ಕೊಡುವ ಕಾರ್ಯ ಪ್ರಗತಿಯಲ್ಲಿದೆ. ಎನ್.ಎಫ್.ಎಸ್.ಎ. (ಕೇಂದ್ರ ವಲಯ)/ಯೋಜನೆಯಡಿ ಏಪ್ರಿಲ್ 2025 ರಿಂದ ಡಿಸೆಂಬರ್ 2025 ರವರೆಗೆ 7,05,38,545 ವೆಚ್ಚ ಭರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ 10,71,36,545 ರೂ. ವೆಚ್ಚ ಭರಿಸಲಾಗಿದೆ .
ಮಾದರಿ ಸೌರ ಗ್ರಾಮ ಯೋಜನೆಯಡಿ ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ 5000 ಹಾಗೂ 5000 ಕ್ಕಿಂತ ಹೆಚ್ಚಿಗೆ ಜನಸಂಖ್ಯೆ ಹೊಂದಿರುವ ಗ್ರಾಮಗಳನ್ನು ಶೇಕಡಾ 100 ರಷ್ಟು ಸೌರ ವಿದ್ಯುತ್ ಅಳವಡಿಸಲು ಎಮ್.ಎನ್.ಆರ್.ಇ. ಯ ಪ್ರತಿಷ್ಠಿತ ಮಾದರಿ ಸೌರ ಗ್ರಾಮ ಯೋಜನೆಯಡಿಯಲ್ಲಿ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ರೋಹನ್ ಜಗದೀಶ್ , sಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP