
ಬೆಂಗಳೂರು, 06 ಜನವರಿ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಿಂದುಳಿದ ವರ್ಗಗಳ ಹರಿಕಾರರಾದ ದಿವಂಗತ ದೇವರಾಜ ಅರಸು ಅವರ ನಂತರ ಕರ್ನಾಟಕದ ಇತಿಹಾಸದಲ್ಲೇ ಅತಿ ದೀರ್ಘಾವಧಿ ಮುಖ್ಯಮಂತ್ರಿ ಎಂಬ ಅಪರೂಪದ ಗೌರವಕ್ಕೆ ಪಾತ್ರರಾಗಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರು ಹೇಳಿದ್ದಾರೆ.
ಬಸವ ಜಯಂತಿಯಂತಹ ಪವಿತ್ರ ದಿನದಂದು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದು ಇತಿಹಾಸ ನಿರ್ಮಿಸಿರುವುದು, ಬಸವಣ್ಣನ ತತ್ವಗಳು ಹಾಗೂ ಮೌಲ್ಯಗಳ ಜೀವಂತ ಪ್ರತಿಬಿಂಬವಾಗಿದ್ದು, ಇದು ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಸಾಗುತ್ತಿರುವ ನಾಡಿನ ಸಂಕೇತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ದಿವಂಗತ ದೇವರಾಜ ಅರಸು ಅವರಂತೆ ಸಮಾಜದ ಅಂಚಿನಲ್ಲಿರುವವರ ಧ್ವನಿಯಾಗಿ, ಹಿಂದುಳಿದವರು, ದಲಿತರು ಹಾಗೂ ಶೋಷಿತ ವರ್ಗಗಳ ಪರವಾಗಿ ನಿರಂತರವಾಗಿ ಹೋರಾಟ ನಡೆಸುತ್ತಾ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತಿರುವ ಬಸವಾದಿ ಚಿಂತನೆಯ ನಾಯಕ ಸಿದ್ದರಾಮಯ್ಯ ಅವರಿಗೆ, ಬಸವ ಭಕ್ತನಾಗಿ ಹಾಗೂ ಸಚಿವನಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬಸವಣ್ಣನ ಕನಸಿನ ಸಮಾನತೆಯ ಸಮಾಜ ನಿರ್ಮಾಣದ ಹಾದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ನಾಡಿಗೆ ಸದಾ ದಾರಿದೀಪವಾಗಲಿ ಎಂದು ಅವರು ಹಾರೈಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa