
ಬೆಂಗಳೂರು, 06 ಜನವರಿ (ಹಿ.ಸ.) :
ಆ್ಯಂಕರ್ : ದೀರ್ಘಾವಧಿ ಮುಖ್ಯಮಂತ್ರಿಯಾಗಿ ನಾಡಿಗೆ ಸೇವೆ ಸಲ್ಲಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವರ ಆರ್ಥಿಕ ಸಲಹೆಗಾರರೂ ಹಾಗೂ ಯಲಬುರ್ಗಾ ಶಾಸಕರೂ ಆಗಿರುವ ಬಸವರಾಜ ರಾಯರೆಡ್ಡಿ ಅಭಿನಂದನಾ ಪತ್ರ ಬರೆದಿದ್ದಾರೆ.
ಕರ್ನಾಟಕದ ಜನಪರ ಆಡಳಿತ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ಶ್ರೀಮಂತ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುತ್ತಿರುವ ದೂರದೃಷ್ಟಿಯ ನಾಯಕತ್ವಕ್ಕಾಗಿ ಸಿದ್ದರಾಮಯ್ಯರನ್ನು ರಾಯರೆಡ್ಡಿ ಶ್ಲಾಘಿಸಿದ್ದಾರೆ.
ದೇವರಾಜ ಅರಸು, ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಅವರ ಪ್ರಗತಿಪರ ಚಿಂತನೆಗಳ ಪರಂಪರೆಯನ್ನು ಇಂದಿನ ಅಗತ್ಯಗಳಿಗೆ ತಕ್ಕಂತೆ ಮುಂದುವರೆಸುತ್ತ ಸಿದ್ದರಾಮಯ್ಯ ಅವರು ಹೊಸ ಚಾರಿತ್ರಿಕ ದಾಖಲೆ ನಿರ್ಮಿಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2013–18 ಹಾಗೂ 2023 ರಿಂದ ಇಂದಿನವರೆಗೆ ಸುದೀರ್ಘ ಆಡಳಿತ ನಡೆಸುತ್ತಿರುವುದು ರಾಜ್ಯದ ಜನತೆಗೆ ಹೆಮ್ಮೆಯ ವಿಷಯವಾಗಿದ್ದು, ಮುಂದಿನ ಅವಧಿಯಲ್ಲೂ ಸರ್ವಾಂಗಿಣ ಅಭಿವೃದ್ಧಿಗಾಗಿ ಶ್ರಮಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್, ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಸೇರಿದಂತೆ ಜನಪರ ಯೋಜನೆಗಳ ಮೂಲಕ ಬಡವರು, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ರೈತರಿಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವ ಒದಗಿಸಲಾಗಿದೆ ಎಂದು ರಾಯರೆಡ್ಡಿ ಪ್ರಶಂಸಿಸಿದ್ದಾರೆ.
ಪಾರದರ್ಶಕತೆ, ಹಣಕಾಸು ಶಿಸ್ತು, ಸಂವಿಧಾನ ನಿಷ್ಠೆ ಹಾಗೂ ಸಮನ್ವಯದ ರಾಜಕಾರಣ ಸಿದ್ದರಾಮಯ್ಯ ಅವರ ನಾಯಕತ್ವದ ವೈಶಿಷ್ಟ್ಯವಾಗಿದ್ದು, ಅವರ ಆಡಳಿತ ಮುಂದಿನ ಪೀಳಿಗೆಗಳಿಗೆ ದಾರಿದೀಪವಾಗಲಿ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa