
ಬೆಂಗಳೂರು, 06 ಜನವರಿ (ಹಿ.ಸ.) :
ಆ್ಯಂಕರ್ : ರಾಷ್ಟ್ರೋತ್ಥಾನ ಆಸ್ಪತ್ರೆ ಹಾಗೂ ಮಹಿಳಾ ಬೈಕರ್ಸ್ ಸಮೂಹವಾದ ‘ಹೀಲ್ಸ್ ಆನ್ ವೀಲ್ಸ್’ ಅವರ ಸಹಯೋಗದಲ್ಲಿ ಗರ್ಭಕಂಠ ಕ್ಯಾನ್ಸರ್ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಬೈಕ್ ರ‍್ಯಾಲಿ(ಬೈಕಥಾನ್) ಆಯೋಜಿಸಲಾಯಿತು.
ಸುಮಾರು 15 ಕಿಲೋಮೀಟರ್ ದೂರದ ಈ ಜಾಗೃತಿ ಬೈಕ್ ರ‍್ಯಾಲಿ ಆರ್.ಆರ್.ನಗರ ಪೊಲೀಸ್ ಠಾಣೆಯಿಂದ ಆರಂಭವಾಗಿ, ಆರ್ಚ್ ರಸ್ತೆ–ಕೆಂಗೇರಿ ಮಾರ್ಗವಾಗಿ ಸಂಚರಿಸಿ ರಾಷ್ಟ್ರೋತ್ಥಾನ ಆಸ್ಪತ್ರೆ ಆವರಣದಲ್ಲಿ ಸಮಾಪ್ತಿಗೊಂಡಿತು.
ಬೈಕಥಾನ್‌ಗೆ ಆರ್.ಆರ್.ನಗರ ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಎಂ. ಶಿವಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಿಳೆಯರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿದ್ದು, ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಜನರಲ್ಲಿ ಅರಿವು ಮೂಡಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಆನಂದ್ ಶಂಕರ್ ಕೆ., ವೈದ್ಯಕೀಯ ನಿರ್ವಾಹಕರಾದ ಡಾ. ಶೈಲಾ ಎಚ್.ಎನ್., ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ವಿನೀತ್ ಮೋಹನ್, ಗೈನಕಾಲಜಿಸ್ಟ್ ಡಾ. ಆಶ್ವಿತಾ, ಕ್ಲಿನಿಕ್ ಆನ್ ವೀಲ್ಸ್ ತಂಡದ ಸದಸ್ಯರು ಹಾಗೂ ಆರ್.ಆರ್.ನಗರ ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಪ್ರತಿನಿಧಿಗಳು, ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಲ್ಲಿ ಜಾಗೃತಿ, ನಿಯಮಿತ ತಪಾಸಣೆ ಹಾಗೂ ಲಸಿಕೀಕರಣ ಅತ್ಯಂತ ಪ್ರಮುಖವೆಂದು ಒತ್ತಿ ಹೇಳಿದರು.
ಸಮುದಾಯ ಆರೋಗ್ಯಸೇವೆಯ ಭಾಗವಾಗಿ ಮುಂದಿನ ದಿನಗಳಲ್ಲಿ ಇಂತಹ ಮುನ್ನೆಚ್ಚರಿಕಾ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದೆಂದು ರಾಷ್ಟ್ರೋತ್ಥಾನ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa