
ದಾವಣಗೆರೆ, 06 ಜನವರಿ (ಹಿ.ಸ.) :
ಆ್ಯಂಕರ್ : ಅಭಿವೃದ್ಧಿ ಕಾಮಗಾರಿ ದೆಹಲಿ ಮಟ್ಟದಲ್ಲಿ ತೀರ್ಮಾನ ಆಗಬೇಕಿಲ್ಲ. ಪಂಚಾಯತ್‍ನಲ್ಲಿ ಗ್ರಾಮಸಭೆ ಮೂಲಕ ಗ್ರಾಪಂ ಸದಸ್ಯರು ತೀರ್ಮಾನ ಕೈಗೊಂಡು ನಮ್ಮ ಹಳ್ಳಿಯಲ್ಲಿ ಇಷ್ಟು ಶೌಚಾಲಯ ಆಗಬೇಕು. ಇಷ್ಟು ಶಾಲೆಗಳ ಅಭಿವೃದ್ಧಿ ಆಗಬೇಕು. ನಮ್ಮ ಹೊಲದ ರಸ್ತೆಗಳು ಅಭಿವೃದ್ಧಿ ಆಗಬೇಕು. ಜಲಮೂಲಗಳ ಶುದ್ದೀಕರಣ, ಹೂಳೆತ್ತಿ ಅಂತರ್ಜಲ ಹೆಚ್ಚಳದ ಮೂಲಕ ಸ್ವಾವಲಂಬಿ ಹಳ್ಳಿಯ ರೂಪುರೇಷ ಹಾಕಿಕೊಂಡು ಪಂಚಾಯತ್‍ನಲ್ಲಿ ತೀರ್ಮಾನ ಮಾಡಿಕೊಂಡರೆ ಜನರು ಉದ್ಯೋಗ ಖಾತರಿಯಲ್ಲಿ ಹಳ್ಳಿಯನ್ನು ಕಟ್ಟುವ ಕೆಲಸ ಮಾಡುತ್ತಾರೆ ಎಂದು ದಾವಣಗೆರೆ ಸಂಸದರಾದ ಡಾ ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ದಾವಣಗೆರೆ ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಿದ್ದ ಮನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣಾ ಶಿಬಿರ ಮತ್ತು ಕೂಲಿಕಾರರ ಕುಂದುಕೊರತೆಗಳ ಪರಿಶೀಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಖಾತರಿ ಯೋಜನೆ ಅನುಷ್ಟಾನದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಕೆಲಸ ಮಾಡಿ ಜನರಿಗೆ ಉದ್ಯೋಗ ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೊನ್ನೂರು ಗ್ರಾಪಂನಲ್ಲಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದರಿಂದ ಇಲ್ಲಿನ ಗ್ರಾಪಂ ಉದ್ಯೋಗ ಖಾತರಿಯಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ ಎಂದು ಶ್ಲಾಘಿಸಿದರು.
ಮನರೇಗಾದಿಂದ ದೇಶದಲ್ಲಿ 5 ರಿಂದ 6 ಕೋಟಿ ಜನ ಕೂಲಿಕಾರ್ಮಿಕರು ಆರ್ಥಿಕವಾಗಿ ಸಬಲರಾಗಿದ್ದಾರೆ. 2005 ರಿಂದ 2026 ರವರೆಗೆ ಸುಮಾರು 20 ವರ್ಷಗಳಿಂದ ಗ್ರಾಮಗಳ ಅಭಿವೃದ್ಧಿಗೆ ಮನರೇಗಾ ಯೋಜನೆ ಕಾರಣವಾಗಿತ್ತು. ಈಗ ಇದನ್ನು ಕೇಂದ್ರ ಸರ್ಕಾರ ಬದಲಾಯಿಸಿ ವಿಕಸಿತ ಭಾರತ-ಗ್ಯಾರಂಟೀ ಫಾರ್ ರೋಜಗಾರ್ ಮತ್ತು ಆವೀಜಿಕ ಮಿಷನ್ ವಿಬಿ-ಜಿ.ರಾಮ್ ಜಿ ಕಾಯ್ದೆ-2005 ಎಂದು ಬದಲಿಸಿದ್ದು ಹಳ್ಳಿ ಅಧಿಕಾರ ಕಸಿದುಕೊಂಡು, ಗ್ರಾಮೀಣ ಆರ್ಥಿಕತೆಗೆ ಪೆಟ್ಟು ನೀಡಲು ಮುಂದಾಗಿದೆ. ಮಹಿಳಾ ಮತ್ತು ಪುರುಷರಿಗೆ ಸಮಾನವಾದ ಕೆಲಸ ಕೊಡುವ ಯೋಜನೆವೊಂದಿದ್ದರೆ ಅದು, ‘ಮನರೇಗಾ’ ಯೋಜನೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾಪುರುಷನ ಹೆಸರಿಟ್ಟ ‘ಮನರೇಗಾ’ಯೋಜನೆಯ ಹೆಸರನ್ನೇ ಅಳಿಸುವ ಕೆಲಸ ಮಾಡಿದೆ ಎಂದು ಸಂಸದರು ಅಸಮಧಾನ ವ್ಯಕ್ತಪಡಿಸಿದರು
ಹಿಂದೂಸ್ತಾನ್ ಸಮಾಚಾರ್ / Rakesh Mahadevappa