
ಬೆಂಗಳೂರು, 06 ಜನವರಿ (ಹಿ.ಸ.) :
ಆ್ಯಂಕರ್ : ಮಲೇಷ್ಯಾದ ಪ್ರಮುಖ ಸೆಮಿಕಂಡಕ್ಟರ್ ಹಬ್ ಆಗಿರುವ ಪೆನಾಂಗ್ ರಾಜ್ಯವು, ಕರ್ನಾಟಕದೊಂದಿಗೆ ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಹಭಾಗಿತ್ವಕ್ಕೆ ಆಸಕ್ತಿ ವ್ಯಕ್ತಪಡಿಸಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಪೆನಾಂಗ್ ರಾಜ್ಯದ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೋ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ನಡೆದ ಸಭೆಯ ನಂತರ ಅವರು ಈ ಮಾಹಿತಿ ನೀಡಿದರು.
ಸಭೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೋ, ಪೆನಾಂಗ್‌ನ ಅಭಿವೃದ್ಧಿ ಪಯಣವನ್ನು ವಿವರಿಸಿದರು.
ಭೌಗೋಳಿಕವಾಗಿ ಸಣ್ಣ ರಾಜ್ಯವಾಗಿದ್ದರೂ ಪೆನಾಂಗ್ ಇಂದು ಜಾಗತಿಕ ಮಟ್ಟದ ಸೆಮಿಕಂಡಕ್ಟರ್ ಶಕ್ತಿಯಾಗಿ ಹೊರಹೊಮ್ಮಿದೆ. ಇದರ ಹಿಂದೆ ಬಲಿಷ್ಠ ಉದ್ಯಮ–ಸಂಶೋಧನಾ ಸಹಭಾಗಿತ್ವ ಪ್ರಮುಖ ಕಾರಣವಾಗಿದೆ. ಈ ಯಶಸ್ಸಿನಲ್ಲಿ ಪೆನಾಂಗ್ ವಿಶ್ವವಿದ್ಯಾಲಯವು ನಿರ್ಣಾಯಕ ಪಾತ್ರ ವಹಿಸಿದ್ದು, ಉದ್ಯಮಗಳಿಗೆ ನೇರವಾಗಿ ಬೆಂಬಲ ನೀಡುವ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ ಎಂದು ಅವರು ಹೇಳಿದರು. ಇದೇ ಮಾದರಿಯನ್ನು ಕರ್ನಾಟಕದೊಂದಿಗೆ ಹಂಚಿಕೊಳ್ಳಲು ಪೆನಾಂಗ್ ಸಿದ್ಧವಿದೆ ಎಂದರು.
ಈ ಸಂದರ್ಭದಲ್ಲಿ ಸಚಿವ ಎನ್.ಎಸ್. ಭೋಸರಾಜು ಅವರು, ಕರ್ನಾಟಕವು ಸಣ್ಣ ನೀರಾವರಿ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಮುಖ ಸಾಧನೆಗಳನ್ನು ನಿಯೋಗದ ಗಮನಕ್ಕೆ ತಂದರು. ವಿಶೇಷವಾಗಿ ‘ತ್ಯಾಜ್ಯದಿಂದ ಸಂಪತ್ತು’ ಪರಿಕಲ್ಪನೆಯಡಿ ಜಾರಿಗೆ ತಂದಿರುವ ಕೆ.ಸಿ. ವ್ಯಾಲಿ (ಕೋರಮಂಗಲ–ಚಲ್ಲಘಟ್ಟ) ಮತ್ತು ಎಚ್.ಎನ್. ವ್ಯಾಲಿ (ಹೆಬ್ಬಾಳ–ನಾಗವಾರ) ಯೋಜನೆಗಳ ಯಶಸ್ಸನ್ನು ವಿವರಿಸಿದರು.
ನಗರದ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ, ಅದನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರದಂತಹ ಬರಪೀಡಿತ ಜಿಲ್ಲೆಗಳ ಕೆರೆಗಳಿಗೆ ಹರಿಸುವ ಮೂಲಕ ಅಂತರ್ಜಲ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಹೊಸ ಜೀವ ಸಿಕ್ಕಿದೆ,” ಎಂದು ಸಚಿವರು ಹೇಳಿದರು. ಈ ಮಾದರಿಗೆ ಪೆನಾಂಗ್ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು.
ಯುವಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಕರ್ನಾಟಕ ಸರ್ಕಾರ ರೂಪಿಸಿರುವ ‘ಕ್ವಾಂಟಮ್ ಆಕ್ಷನ್ ಪ್ಲಾನ್’ ನಲ್ಲಿ ಭಾಗಿಯಾಗಲು ಪೆನಾಂಗ್ ನಿಯೋಗ ಉತ್ಸುಕತೆ ತೋರಿತು.
ಪೂರ್ವದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಪೆನಾಂಗ್ ಜೊತೆಗಿನ ಸಹಭಾಗಿತ್ವಕ್ಕೆ ಕರ್ನಾಟಕ ಸರ್ಕಾರ ಸಂಪೂರ್ಣ ಮುಕ್ತವಾಗಿದೆ ಎಂದು ಸಚಿವರು ಹೇಳಿದರು. ಬೆಂಗಳೂರು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿನ ಪರಿಣತಿ ಹಾಗೂ ಪೆನಾಂಗ್‌ನ ಸೆಮಿಕಂಡಕ್ಟರ್ ಸಾಮರ್ಥ್ಯ ಒಟ್ಟುಗೂಡಿದರೆ ಅಪಾರ ಅವಕಾಶಗಳು ಸೃಷ್ಟಿಯಾಗಲಿವೆ ಎಂಬ ಅಭಿಪ್ರಾಯವನ್ನು ಉಭಯ ನಾಯಕರು ವ್ಯಕ್ತಪಡಿಸಿದರು.
ಸಭೆಯ ಅಂತ್ಯದಲ್ಲಿ ಉಪಮುಖ್ಯಮಂತ್ರಿ ಜಗದೀಪ್ ಸಿಂಗ್ ದಿಯೋ ಅವರು, ಸಚಿವ ಭೋಸರಾಜು ಅವರಿಗೆ ಮಲೇಷ್ಯಾ ಮತ್ತು ಪೆನಾಂಗ್‌ಗೆ ಅಧಿಕೃತ ಭೇಟಿ ನೀಡುವಂತೆ ಆಹ್ವಾನ ನೀಡಿದರು. ಪೆನಾಂಗ್‌ನ ವಿಶ್ವವಿದ್ಯಾಲಯಗಳ ಸಂಶೋಧನಾ ಸೌಲಭ್ಯಗಳು ಹಾಗೂ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಖುದ್ದಾಗಿ ವೀಕ್ಷಿಸಿ, ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದ ಒಪ್ಪಂದಗಳನ್ನು ಅಂತಿಮಗೊಳಿಸಲು ಈ ಭೇಟಿ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಐಟಿ–ಬಿಟಿ ಮತ್ತು ವಿಜ್ಞಾನ–ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಎನ್. ಮಂಜುಳಾ, ಕೆ–ಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಸದಾಶಿವ ಪ್ರಭು, ಪೆನಾಂಗ್ ರಾಜ್ಯದ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa