ಭಾರತದ ಭವ್ಯಭವಿಷ್ಯಕ್ಕಾಗಿ ಮಾದಕವಸ್ತು ಮುಕ್ತಗೊಳಿಸಿ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ
ಶಿವಮೊಗ್ಗ, 06 ಜನವರಿ (ಹಿ.ಸ.) : ಆ್ಯಂಕರ್ : ದೇಶದ ರಕ್ಷಣೆ, ಸ್ವಸ್ಥ ಸಮಾಜ ನಿರ್ಮಾಣ ಹಾಗೂ ಭಾರತದ ಭವ್ಯಭವಿಷ್ಯಕ್ಕಾಗಿ ಮಾದಕ ವಸ್ತುಗಳ ವ್ಯಸನ, ಮಾರಾಟ ಮತ್ತು ಕಳ್ಳಸಾಗಣೆ ವಿರುದ್ಧ ಸಮಗ್ರ ಜನಜಾಗೃತಿ ಅಗತ್ಯವಾಗಿದ್ದು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಶಿವಮೊಗ್ಗ ನೂತ
ಭಾರತದ ಭವ್ಯಭವಿಷ್ಯಕ್ಕಾಗಿ ಮಾದಕವಸ್ತು ಮುಕ್ತಗೊಳಿಸಿ : ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ


ಶಿವಮೊಗ್ಗ, 06 ಜನವರಿ (ಹಿ.ಸ.) :

ಆ್ಯಂಕರ್ : ದೇಶದ ರಕ್ಷಣೆ, ಸ್ವಸ್ಥ ಸಮಾಜ ನಿರ್ಮಾಣ ಹಾಗೂ ಭಾರತದ ಭವ್ಯಭವಿಷ್ಯಕ್ಕಾಗಿ ಮಾದಕ ವಸ್ತುಗಳ ವ್ಯಸನ, ಮಾರಾಟ ಮತ್ತು ಕಳ್ಳಸಾಗಣೆ ವಿರುದ್ಧ ಸಮಗ್ರ ಜನಜಾಗೃತಿ ಅಗತ್ಯವಾಗಿದ್ದು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಶಿವಮೊಗ್ಗ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಕರೆ ನೀಡಿದರು.

ಅವರು ಇಂದು ಪರಿವರ್ತನಾ ಟ್ರಸ್ಟ್, ಬೆಂಗಳೂರು, ಜಿಲ್ಲಾಡಳಿತ ಹಾಗೂ ರೋಟರಿ ಸಂಸ್ಥೆ ಶಿವಮೊಗ್ಗದ ವಿವಿಧ ವಲಯಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಡ್ರಗ್ಸ್ ಮುಕ್ತ ಕರ್ನಾಟಕ ಜನಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಹಜ ಕುತೂಹಲದಿಂದ ನಿಧಾನವಾಗಿ ಆರಂಭಗೊಳ್ಳುವ ಮಾದಕ ವಸ್ತುಗಳ ಸೇವನೆ ಕೊನೆಗೆ ಗಂಭೀರ ವ್ಯಸನವಾಗಿ ಪರಿಣಮಿಸುತ್ತದೆ. ಇದರ ಪರಿಣಾಮವಾಗಿ ಅನೇಕ ಯುವಕ-ಯುವತಿಯರು ತಮ್ಮ ಅರಿವಿಲ್ಲದೇ ಅಮೂಲ್ಯವಾದ ಭವಿಷ್ಯವನ್ನು ನಾಶಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಮನೋರಂಜನೆ, ಹವ್ಯಾಸಿ ಕ್ಲಬ್‌ಗಳು ಹಾಗೂ ತಂತ್ರಜ್ಞಾನ ಅಭಿವೃದ್ಧಿಯಿಂದ ಪರಿಸರದ ಮೇಲೆ ಬೀರಿರುವ ಪರಿಣಾಮಗಳು ಗಂಭೀರವಾಗಿವೆ. ಇಂದಿನ ಯುವಪೀಳಿಗೆ ಮಾದಕ ವಸ್ತುಗಳ ಆಕರ್ಷಣೆಗೆ ಒಳಗಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಯುವಕರು ಮಾನಸಿಕ ಸ್ಥೈರ್ಯ ಕಳೆದುಕೊಳ್ಳದಂತೆ ಗಮನ ಕೇಂದ್ರೀಕರಿಸುವ ಹೊಣೆ ಸಮಾಜ ಹಾಗೂ ಪೋಷಕರ ಮೇಲಿದೆ ಎಂದು ಹೇಳಿದರು.

ಮಾದಕ ವ್ಯಸನ ಎಂಬ ಮಾಯಾಜಾಲಕ್ಕೆ ಯುವಕರು ಸಿಲುಕುವ ಮೊದಲು ಅದನ್ನು ಬಲವಾಗಿ ನಿಯಂತ್ರಿಸಬೇಕಿದೆ. ಅದಕ್ಕಾಗಿ ಇಡೀ ಸಮಾಜವೇ ಎಚ್ಚೆತ್ತುಕೊಳ್ಳಬೇಕು. ಜಾಗೃತ ಸಮಾಜ ನಿರ್ಮಾಣ ಹಾಗೂ ದೇಶದ ಭವಿಷ್ಯವನ್ನು ಸಂರಕ್ಷಿಸುವ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರ ಸಕ್ರಿಯ ಭಾಗವಹಿಸುವಿಕೆ ಅತ್ಯಂತ ಅಗತ್ಯವೆಂದು ಜಿಲ್ಲಾಧಿಕಾರಿಗಳು ಹೇಳಿದರು.

ಮಾದಕ ವಸ್ತು ವ್ಯಸನವು ವ್ಯಕ್ತಿಯನ್ನು ಮಾತ್ರವಲ್ಲದೆ, ಇಡೀ ಸಮಾಜವನ್ನೇ ಆವರಿಸಿ ವಿನಾಶದ ದಾರಿಯತ್ತ ಕೊಂಡೊಯ್ಯುತ್ತದೆ. ಭವ್ಯ ಇತಿಹಾಸ ಹಾಗೂ ಸಾಂಸ್ಕೃತಿಕ–ಆಧ್ಯಾತ್ಮಿಕ ಪರಂಪರೆ ಹೊಂದಿರುವ ನಮ್ಮ ನಾಡಿನಲ್ಲಿ ಹಿರಿಯರ ಆಶಯದಂತೆ ಬದುಕು ರೂಪಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು, “ಮದ್ಯ ಮತ್ತು ಮಾದಕ ವಸ್ತುಗಳ ನಿಯಂತ್ರಣ ಹಾಗೂ ನಶೆಮುಕ್ತ ಸಮಾಜ ನಿರ್ಮಾಣ ಹೆಸರಿನಲ್ಲಿ ಅನೇಕ ಜನಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಮತ್ತೊಂದೆಡೆ ಸರ್ಕಾರವೇ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುತ್ತಿರುವುದು ವಿಪರ್ಯಾಸ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಶ್ ಬಾನು, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಚಂದ್ರಶೇಖರ್, ಹರ್ಷ ಕಾಮತ್, ಬಿ.ಜಿ. ಧನರಾಜ್, ಶ್ರೀಮತಿ ಭಾರತಿ ಚಂದ್ರಶೇಖರ್, ಸುದರ್ಶನ್, ಉದಯ ಕದಂಬ, ವಿಜಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande