
ಕೊಪ್ಪಳ, 06 ಜನವರಿ (ಹಿ.ಸ.) :
ಆ್ಯಂಕರ್ : ಜೀವ ಉಳಿಸುವ ಮಹಾನಕಾರ್ಯವಾಗಿರುವ ರಕ್ತದಾನ ಎಲ್ಲದಾನಕ್ಕೂ ಶ್ರೇಷ್ಠ ಎಂದು ಕೊತಬಾಳ ಶ್ರೀ ಗಂಗಾಧರ ಮಹಾಸ್ವಾಮೀಜಿಗಳು ಹೇಳಿದ್ದಾರೆ.
ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಭಾರತೀಯ ರೆಡ್‍ಕ್ರಾಸ್ ಕೊಪ್ಪಳ ಶಾಖೆ ಶ್ರೀ ಗವಿಸಿದ್ಧೇಶ್ವರ ಆರ್ಯುವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತ್ರೆಗಳಲ್ಲಿ ಇಂಥ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.ಕಳೆದ ಹತ್ತು, ಹನ್ನೊಂದು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ.ಪ್ರತಿ ವರ್ಷ ನೂರಾರು ಜನರು ರಕ್ತದಾನ ಮಾಡುತ್ತಾರೆ. ಅದು ಹಲವರ ಜೀವ ಉಳಿಸಲು ಕಾರಣವಾಗುತ್ತದೆ ಎಂದರು.
ಇಟಗಿಯ ಶ್ರೀ ಗುರುಶಾಂತವೀರ ಮಹಾಸ್ವಾಮೀಜಿಗಳು ಮಾತನಾಡಿ, ರಕ್ತದಾನ ಎಲ್ಲದಾನಕ್ಕಿಂತಲೂ ಶ್ರೇಷ್ಠ ಕಾರ್ಯವಾಗಿದೆ. ಪ್ರತಿಯೊಬ್ಬರು ಸಹ ಅರ್ಹವಾಗಿದ್ದರೇ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ತೊಡಗಬೇಕಾಗಿದೆ. ನಾನು ಸೇರಿದಂತೆ ಅನೇಕ ಸ್ವಾಮೀಜಿಗಳು ರಕ್ತದಾನವನ್ನು ಪ್ರತಿ ವರ್ಷ ಮಾಡುತ್ತಾ ಬಂದಿದ್ದೇವೆ. ಇದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದರು.
ಸ್ವಾಮೀಜಿಗಳ ರಕ್ತದಾನ - ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದ ಬಳಿ ಶ್ರೀ ಗಂಗಾಧರ ಸ್ವಾಮೀಜಿಗಳು, ಶ್ರೀ ಗುರುಶಾಂತವೀರ ಮಹಾಸ್ವಾಮೀಜಿಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ರಕ್ತದಾನ ಮಾಡಿದರು.
ಅಭಿನವ ನಾಗಲಿಂಗ ಅವಧೂತರು, ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ, ಶ್ರೀ ಬಸವಭೂಷಣ ಸ್ವಾಮೀಜಿ, ಶ್ರೀ ಯಶವಂತದೇವರು ಸ್ವಾಮೀಜಿ, ಶ್ರೀ ಬ್ರಹ್ಮಾನಂದ ಸ್ವಾಮಿಜಿಗಳು ಸಾನಿಧ್ಯ ವಹಿಸಿದ್ದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಉಪಸಭಾಪತಿ ಡಾ.ಶ್ರೀನಿವಾಸ ಹ್ಯಾಟಿ, ಕೊಪ್ಪಳ ಶಾಖೆಯ ಸಭಾಪತಿ ಸೋಮರಡ್ಡಿ ಅಳವಂಡಿ, ಆರ್ಯುವೇದ ಕಾಲೇಜಿನ ಪ್ರಾಚಾರ್ಯರಾದ ಡಾ.ಮಹಾಂತೇಶ ಸಾಲಿಮಠ, ಉಪಸಭಾಪತಿಗಳಾದ ಡಾ.ಸಿ.ಎಸ್. ಕರಮುಡಿ, ಡಾ.ಮಂಜುನಾಥ, ನಿರ್ದೇಶಕರಾದ ಡಾ.ಶಿವನನಗೌಡ, ಡಾ.ಗವಿಸಿದ್ದನಗೌಡ, ರಾಜೇಶಯಾವಗಲ್, ಡಾ.ಸುರೇಶ ಹಕ್ಕಂಡಿ, ಡಾ.ಪರಮೇಶ್ವರ ಅವರು ಸೇರಿದಂತೆ ಮೊದಲಾದವರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್