
ಕೋಲಾರ, 0೫ ಜನವರಿ (ಹಿ.ಸ) :
ಆ್ಯಂಕರ್ : ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನುಮ ದಿನದ ಅಂಗವಾಗಿ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕೇಂದ್ರಲ್ಲಿ ಶೇಕ್ಸ್ ಪಿಯರ್ ನಾಟಕ ಪ್ರಸ್ತುತಪಡಿಸಲಾಯಿತು.
ಬೆಟ್ಟದ ಬಸ್ಸಿನ ಚಾಲಕ ನಿರ್ವಾಹಕರ ಸೇವೆ ಸ್ಮರಿಸಿ ಗೌರವಿಸಿ ಮಾತನಾಡಿದ ಕ.ರಾ.ರ.ಸಾ.ನಿಗಮ, ಕೋಲಾರ ವಿಭಾಗದ ವಿಭಾಗೀಯ ಯಾಂತ್ರಿಕ ಅಭಿಯಂತರ, ಕವಿ, ಗೀತರಚನೆಕಾರ ಹಾಗೂ ರಂಗಭೂಮಿ ಕಲಾವಿದರಾದ ಶಾಂತಕುಮಾರ್, ಸಾವಿತ್ರಿಬಾಯಿ ಫುಲೆ ಅವರ ಹುಟ್ಟು, ಬೆಳವಣಿಗೆ, ಜೀವನದಲ್ಲಿ ಕೈಗೊಂಡ ಅಕ್ಷರ ಚಳವಳಿಯ ಪ್ರಸಂಗಗಳನ್ನು ಮೆಲುಕು ಹಾಕಿಕೊಂಡರು.
ಬಾಲ್ಯದಲ್ಲೇ ಅವರಿಗಿದ್ದ ಧೈರ್ಯ ಮತ್ತು ಆತ್ಮವಿಶ್ವಾಸ ಮುಂದಿನ ಹಾದಿಯನ್ನು ರೂಪಿಸಿತ್ತು. . ೧೮೩೧ ಜನವರಿ ೩ನೇ ತಾರೀಖು ಜನಿಸಿದ ಸಾವಿತ್ರಿಬಾಯಿ ತನ್ನ ೯ ನೇ ವಯಸ್ಸಿನಲ್ಲಿ ಜ್ಯೋತಿಬಾಫುಲೆ ಅವರೊಂದಿಗೆ ವಿವಾಹವಾಗುತ್ತಾರೆ. ಅಂದಿನ ಇಂಗ್ಲೀಷ್ ಮಿಷನರಿಗಳು ಸ್ಥಾಪಿಸಿದ್ದ ಶಾಲೆಯಲ್ಲಿ ವ್ಯಾಸಂಗ ಮಾಡಿ ವಿದ್ಯಾವಂತರಾಗಿದ್ದ ಅದರಲ್ಲೂ ವಿಶೇಷವಾಗಿ ಇಂಗ್ಲೀಷ್ ಪಾಂಡಿತ್ಯ ಗಳಿಸಿದ್ದ ಜ್ಯೋತಿಬಾಫುಲೆ ಅನೇಕ ಸಮಾಜ ಕಾರ್ಯಗಳನ್ನು ಮಾಡಲು ತೊಡಗಿಸಿಕೊಂಡರು. ಸರಿಸಾಟಿ ಸಹಕಾರ ನೀಡಿದ ಸಾವಿತ್ರಿಬಾಯಿ ಫುಲೆಯವರ ವಿಶಾಲ ಮನೋಭಾವ ಮತ್ತು ಪ್ರಬುದ್ಧತೆಯನ್ನು ಅರಿತು ಅವರಿಗೆ ಮನೆಯಲ್ಲೇ ಶಿಕ್ಷಣ ಕೊಡಲು ಆರಂಭಿಸಿದರು ಎಂದು ತಿಳಿಸಿದರು.
ಶಿಕ್ಷಕಿಯಾಗುವ ಮಟ್ಟಕ್ಕೆ ಬೆಳೆಸಿ, ಮೊದಲು ಹೆಣ್ಣು ಮಕ್ಕಳಿಗೆ ಶಾಲೆ ತೆರೆದು ಹಾಗೆಯೇ ವಿಸ್ತರಿಸಿಕೊಂಡು, ರಾತ್ರಿಶಾಲೆ, ಬೇರೆ ಬೇರೆ ಊರುಗಳಲ್ಲಿ ಶಾಲೆಗಳನ್ನು ತೆರೆದು ನಡೆಸಿದರು. ೧೮೦ ವರ್ಷಗಳ ಹಿಂದೆ ಈ ದೇಶದಲ್ಲಿ ಲಿಂಗ ತಾರತಮ್ಯ, ಜಾತಿ ಧರ್ಮ ತಾರತಮ್ಯಗಳಿಂದ ತತ್ತರಿಸಿ ಹೋಗಿದ್ದ ಮಹಿಳೆ ಹಾಗೂ ನಿಮ್ನ ವರ್ಗದ ಜನರಿಗೆ ಬೆಳಕಾಗಿ ಮಹಾರಾಷ್ಟರದ ಸತಾರದಲ್ಲಿ ಹುಟ್ಟಿದ್ದು ಸಾವಿತ್ರಿಬಾಯಿ ಫುಲೆ. ಅಕ್ಷರವನ್ನು ಮಡಿವಂತಿಕೆಯ ಸಂಪ್ರದಾಯದ ಹೆಸರಲ್ಲಿ ವಂಚಿಸಿ ಮಹಿಳೆಯನ್ನು ಶಿಕ್ಷಣದಿಂದ ದೂರವಿರಿಸಿದ್ದ ಈ ದೇಶದ ವ್ಯವಸ್ಥೆಯನ್ನು ಫುಲೆ ದಂಪತಿಗಳು ಒಪ್ಪಿಕೊಳ್ಳಲಿಲ್ಲ ಹಾಗೂ ಆ ಹಿನ್ನೆಲೆಯಲ್ಲಿ ಮೇಲ್ವರ್ಗದ ಒಂದು ಸಮುದಾಯ ನಾನಾ ಚಿತ್ರಹಿಂಸೆಗಳು ಕೊಡಲು ಪ್ರಯತ್ನಿಸುತ್ತಾರೆ. ಸಾವಿತ್ರಿಬಾಯಿ ಫುಲೆ ಶಾಲೆಗೆ ಹೋಗುವ ಮಾರ್ಗದಲ್ಲಿ ಅಂದಿನ ಮೇಲ್ವರ್ಗದ ಜನ ಸಗಣಿ ಎಸೆದು ವಿರೋಧ ವ್ಯಕ್ತಪಡಿಸುತ್ತಿದ್ದರು. ಆ ಕಾರಣದಿಂದ ಶಾಲೆಯ ಬಳಿಗೆ ಹೋಗಿ ಮತ್ತೊಂದು ಸೀರೆ ಉಟ್ಟು ದೃತಿಗೆಡದೇ ಅವರ ಚಳವಳಿ ಮುಂದುವರೆಸುತ್ತಾರೆ ಎಂದು ತಿಳಿಸಿದರು.
ದೇವರಾಜ ಅರಸು ಮಹಾವಿದ್ಯಾಲಯದ ಕುಲಸಚಿವ ಡಾ.ಮುನಿನಾರಾಯಣ ಮಾತನಾಡಿ ಆದಿಮದಲ್ಲಿ ಪ್ರತಿ ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುವುದು ಗೊತ್ತಿತ್ತು. ಆದರೆ ಕೆಲಸದ ಒತ್ತಡವಿದ್ದ ಕಾರಣ ಬರಲು ಆಗಿರಲಿಲ್ಲ. ಇವತ್ತು ಇಲ್ಲಿ ಬಂದು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಬಹಳ ಸಂತೋಷವಾಗಿದೆ. ನಾವು ಪ್ರತಿ ವರ್ಷವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುತ್ತೇವೆ. ಬೇರೆ ಬೇರೆ ಬಾಗಗಳಿಂದ ತಂಡಗಳನ್ನು ಕರೆಸಿಕೊಳ್ಳುತ್ತಿದ್ದೆವು. ಆದಿಮ ಕೇಂದ್ರ ಅಧ್ಯಕ್ಷ ಎನ್ ಮುನಿಸ್ವಾಮಿಯವರನ್ನು ಭೇಟಿಯಾಗಿ ಕೇಳಿದಾಗ ಇಲ್ಲಿನ ತಂಡ ಕಳುಹಿಸಿಕೊಟ್ಟಿದ್ದರು ಕಾರ್ಯಕ್ರಮ ಚೆನ್ನಾಗಿ ಮೂಡಿಬಂತು. ಆದಿಮದೊಂದಿಗೆ ನಾವು ಇರುತ್ತೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಆರ್.ಹನುಮಂತರಾಯ, ನಿವೃತ್ತ ಪ್ರಾಧ್ಯಾಪಕಿ ಮೈಸೂರು ಪ್ರೊ.ಶಶಿಕಲಾ ದೇವ ಎ, ದೊಡ್ಡವಲಗಮಾದಿ ಗ್ರಾಮ ಪಂಚಾಯಿತಿ, ಕಾರ್ಯದರ್ಶಿ ಹೆಚ್. ರತ್ನಮ್ಮ ನಾಗರಾಜ್ ಇದ್ದರು.
ಇದೇ ಸಂದರ್ಭದಲ್ಲಿ ಬೆಟ್ಟದ ಬಸ್ಸಿನ ಚಾಲಕ ಸಯ್ಯದ್ ಬಾಬಾ ಜಾನ್ ಹಾಗೂ ನಿರ್ವಾಹಕ ಸುಬ್ರಮಣಿ ಅವರನ್ನು ಆದಿಮ ಸಂಸ್ಥೆ ಸನ್ಮಾನಿಸಿ ಗೌರವಿಸಿತು.
ಗೆ.ನ.ಅಶ್ವತ್ ಬಸವಣ್ಣ ವಚನ ಹಾಡಿದರು, ಜಗದೀಶ್ ಆರ್. ಜಾಣಿ ಆದಿಮ ಆಶಯಗೀತೆ ಹಾಡಿದರು.
ಜಗತ್ತಿನ ಪ್ರಸಿದ್ಧ ನಾಟಕಕಾರ ಶೇಕ್ಸ್ ಪಿಯರ್ ರಚನೆಯ, ಕನ್ನಡ ಅನುವಾದ ಡಾ.ರಾಮಚಂದ್ರ ಕಲ್ಮಡ್ಕ 'ಮ್ಯಾಕ್ ಬೆತ್' ನಾಟಕ ಉತ್ತಮ ರಂಗಸಜ್ಜಿಕೆ, ವಸ್ತ್ರವಿನ್ಯಾಸದೊಂದಿಗೆ ಅದ್ಭುತವಾಗಿ ಮೂಡಿಬಂದಿತು. ನಾಟಕ ನಿರ್ದೇಶನ, ವಿನ್ಯಾಸ; ಗ.ನ.ಅಶ್ವತ್, ವಸ್ತ್ರ ವಿನ್ಯಾಸ; ಜಗದೇಶ್ ಆರ್ ಜಾಣಿ, ಸಂಗೀತ ನಿರ್ವಹಣೆ;ತುರಾಂಡಹಳ್ಳಿ ಶ್ರೀನಿವಾಸ್, ಬೆಳಕು ನಿರ್ವಹಣೆ; ಆದಿಮ ರಂಗಶಿಕ್ಷಣ ವಿದ್ಯಾರ್ಥಿಗಳು, ಪ್ರಸಾಧನ; ಎಸ್.ಮೋಹನ್ ಕುಮಾರ್ ಬೆಂಗಳೂರು. ಅಭಿನಯಿಸಿದವರು ಆದಿಮ ರಂಗ ಶಿಕ್ಷಣ ಕೇಂದ್ರ ವಿದ್ಯಾರ್ಥಿಗಳು. ಕಾರ್ಯಕ್ರಮಲ್ಲಿ ಕೆ.ವಿ.ಕಾಳಿದಾಸ್, ಹ.ಮಾ.ರಾಮಚಂದ್ರ, ನಾವೆಂಕಿ ಕೋಲಾರ, ಆದಿಮ ಅಧ್ಯಕ್ಷ ಎನ್.ಮುನಿಸ್ವಾಮಿ, ಆಡಳಿತಾಧಿಕಾರಿ ರಮೇಶ್ ಅಗ್ರಹಾರ, ನಾಯಕ್, ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಚಿತ್ರ : ಕೋಲಾರ ಶಿವಗಂಗೆ ಬೆಟ್ಟದ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಮ್ಯಾಕ್‌ಬತ್ ನಾಟಕ ಪ್ರದರ್ಶನ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್