
ಬೆಂಗಳೂರು, 05 ಜನವರಿ (ಹಿ.ಸ.) :
ಆ್ಯಂಕರ್ : ವಿಕಾಸ ಸೌಧದಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿದರು.
ನಾಡಿನ ಜನರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಇಲಾಖೆ ಈಗಾಗಲೇ ಅನುಷ್ಠಾನಗೊಳಿಸಿರುವ ಆರೋಗ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ, ಮುಂದಿನ ದಿನಗಳಲ್ಲಿ ಜಾರಿಗೊಳ್ಳಲಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನತೆಗೆ ತಲುಪಿಸುವ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಸಭೆಯಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳ ಗುಣಮಟ್ಟ ಸುಧಾರಣೆ, ಆಸ್ಪತ್ರೆಗಳ ಸೌಲಭ್ಯಗಳ ವೃದ್ಧಿ, ತಡೆಗಟ್ಟುವ ಆರೋಗ್ಯ ಕಾರ್ಯಕ್ರಮಗಳ ಬಲವರ್ಧನೆ ಹಾಗೂ ಗ್ರಾಮೀಣ–ನಗರ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳ ಸಮಾನ ಪ್ರವೇಶವನ್ನು ಖಚಿತಪಡಿಸುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸಚಿವರು ಮಾರ್ಗದರ್ಶನ ನೀಡಿದರು.
ಜನಸಾಮಾನ್ಯರಿಗೆ ಸರಳ, ಸಕಾಲಿಕ ಮತ್ತು ಗುಣಮಟ್ಟದ ಆರೋಗ್ಯ ಸೇವೆ ದೊರಕುವಂತೆ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದು ಅವರು ಸೂಚಿಸಿದರು.
ಅಧಿಕಾರಿಗಳು ವಿವಿಧ ಯೋಜನೆಗಳ ಪ್ರಸ್ತುತ ಸ್ಥಿತಿಗತಿ, ಸಾಧನೆಗಳು ಮತ್ತು ಎದುರಾಗುತ್ತಿರುವ ಸವಾಲುಗಳ ಬಗ್ಗೆ ಮಾಹಿತಿ ನೀಡಿದರು.
ಜನಕೇಂದ್ರಿತ ಆರೋಗ್ಯ ವ್ಯವಸ್ಥೆ ನಿರ್ಮಾಣವೇ ಸರ್ಕಾರದ ಆದ್ಯತೆಯಾಗಿದ್ದು, ಎಲ್ಲ ಕಾರ್ಯಕ್ರಮಗಳನ್ನು ಫಲಪ್ರದವಾಗಿ ಜಾರಿಗೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa