
ಕೋಲಾರ, ೦೫ ಜನವರಿ (ಹಿ.ಸ) :
ಆ್ಯಂಕರ್ : ತಾಲೂಕಿನ ಜನ್ನಘಟ್ಟ ಗ್ರಾಮ ಪಂಚಾಯತಿ ಕಟ್ಟಡ ಹಳೆಯದಾಗಿದ್ದು ಜೋರಾಗಿ ಮಳೆ ಬಂದರೆ ಬೀಳುವ ಪರಿಸ್ಥಿತಿ ಇದೆ. ಕನಿಷ್ಠ ಮೂಲಭೂತ ಸೌಕರ್ಯವಾದ ಶೌಚಾಲಯ ಕೂಡ ಇಲ್ಲವಾಗಿದೆ, ನೂತನ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಿಸಲು ಜಾಗ ಕೊಡಿ ಎಂದು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲವೆಂದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕಲ್ಲೂರು ಚಲಪತಿ ಅಧಿಕಾರಿಗಳು ವಿರುದ್ಧ ಅಸಮದಾನ ಹೊರಹಾಕಿದ್ದಾರೆ.
ಜನ್ನಘಟ್ಟ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಚಲಪತಿ ಮಾತನಾಡಿ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡವಲ್ಲಿ ಮಹತ್ವದ ಪಾತ್ರ ವಹಿಸುವ ಗ್ರಾಮ ಪಂಚಾಯತಿಯ ಕಟ್ಟಡವೇ ಮೂಲಭೂತ ಸೌಕರ್ಯಗಳ ಇಲ್ಲದೇ ನರಳುತ್ತಿದೆ. ಇರುವ ಕಟ್ಟಡದಲ್ಲಿ ಎರಡು ಅಂಗನವಾಡಿ ಕೇಂದ್ರ ಗ್ರಂಥಾಲಯ ಜೊತೆ ಗ್ರಾಮ ಪಂಚಾಯತಿ ಕಾರ್ಯಲಯ ಕೂಡ ಕಾರ್ಯ ನಿರ್ವಹಿಸಲಾಗುತ್ತಿದೆ. ಕಟ್ಟಡ ಈಗಾಗಲೇ ಶಿಥಿಲಗೊಂಡಿದ್ದು ಬೀಳುವ ಹಂತದಲ್ಲಿ ಇದೆ. ಇನ್ನೂ ಅನೇಕ ಬಾರಿ ಗ್ರಾಮ ಪಂಚಾಯತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಹೊಸ ಕಟ್ಟಡ ಕಟ್ಟಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಗ್ರಾಮ ಪಂಚಾಯತಿ ವತಿಯಿಂದ ತಹಶಿಲ್ದಾರ ಅವರಿಗೆ ಸರ್ಕಾರದ ಜಾಗ ನೀಡುವಂತೆ ಮನವಿ ಮಾಡಲಾಗಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಮನವಿ ಸಲ್ಲಿಸಿದ ವೇಳೆ ಕ್ರಮ ಕೈಗೊಳ್ಳವಂತೆ ಅಧಿಕಾರಿಗಳಿಗೆ ಸೂಚಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಾಲಿ ಗ್ರಾಮ ಪಂಚಾಯತಿ ಕಟ್ಟಡದಲ್ಲಿ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಅಧ್ಯಕ್ಷ ಉಪಾಧ್ಯಕ್ಷ ಕೊಠಡಿ ಇಲ್ಲ. ಸಿಬ್ಬಂದಿ ಕುಳಿತುಕೊಂಡು ಕೆಲಸ ಮಾಡಲು ಅಗುತ್ತಿಲ್ಲ. ಕನಿಷ್ಠ ಮೂಲಭೂತ ಸೌಕರ್ಯವಾದ ಶೌಚಾಲಯ ಕೂಡ ಇಲ್ಲವಾಗಿದೆ. ಇದರಿಂದಾಗಿ ಸಿಬ್ಬಂದಿ ಮಹಿಳಾ ಸದಸ್ಯರು ತ್ರೀವ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮ ಪಂಚಾಯತಿ ನೂತನ ಕಟ್ಟಡ ನಿರ್ಮಿಸಲು ಸರ್ಕಾರ ಜಾಗ ಮಂಜೂರು ಮಾಡುವಂತೆ ಅನೇಕ ಬಾರಿ ತಾಲ್ಲೂಕು ಕಚೇರಿಗೆ ಪತ್ರ ಬರೆದು ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದ್ರು. ಗ್ರಾಮದ ಸಮೀಪ ಸರ್ವೇ ನಂಬರ್ ೨೩೮ ರಲ್ಲಿ ಸರ್ಕಾರ ಗೋಮಾಳ ಜಾಗ ಇದ್ದು ಅದರಲ್ಲಿ ೫-೧೦ ಗುಂಟೆ ಜಮೀನು ಮಂಜೂರು ಮಾಡಿಕೊಡಬೇಕಾಗಿ ಜಿಲ್ಲಾಡಳಿತಕ್ಕೆ ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಗೋವಿಂದ, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಜಯಮ್ಮ ಸೋಮಶೇಖರ್, ಹಾಲಿ ಸದಸ್ಯ ಲಕ್ಷ್ಮಣ, ಗ್ರಾಮದ ಮುಖಂಡರಾದ ಬಾಬು, ದೇವಾಲಯ ಅರ್ಚಕ ನಾರಾಯಣ ಸ್ವಾಮಿ, ಗ್ರಾಮದ ಹಿರಿಯರಾದ ಈಶ್ವರಪ್ಪ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಜನ್ನಘಟ್ಟ ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲಗೊಂಡಿದ್ದು, ದುರಸ್ತಿಪಡಿಸುವಂತೆ ಸದಸ್ಯರು ಒತ್ತಾಯಿಸಿದರು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್