
ಕೋಲಾರ, ಜನವರಿ ೦೫ (ಹಿ.ಸ) :
ಆ್ಯಂಕರ್ : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಾಮಾಜಿಕ ಕಾಳಜಿಯ ಭಾಗವಾಗಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಡೆಸ್ಕ್ಗಳನ್ನು ನೀಡುತ್ತಿದ್ದು,ಗ್ರಾಮೀಣ ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಈ ಕೊಡುಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ ತಿಳಿಸಿದರು.
ಕೋಲಾರ ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದ ಅನುದಾನಿತ ಶ್ರೀ ಚೌಡೇಶ್ವರಿ ಪ್ರೌಢಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನ ದೀಪ ಯೋಜನೆಯಡಿ ೧೦ ಡೆಸ್ಕ್ ಮತ್ತು ಬೆಂಚುಗಳನ್ನು ವಿತರಿಸಿ ಮಾತನಾಡಿದರು.
ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಜ್ಞಾನದೀಪ ಯೋಜನೆಯಡಿ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸುವುದು, ಟ್ಯೂಷನ್ ಕ್ಲಾಸ್ ನಡೆಸುವ ಮೂಲಕ ಮಕ್ಕಳ ವಿದ್ಯಾರ್ಜನೆಗೆ ನೆರವಾಗುತ್ತಿರುವುದಾಗಿ ತಿಳಿಸಿದರು.
ಯೋಜನೆಯಿಂದ ಜಿಲ್ಲೆಯಲ್ಲಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದು, ಕೆರೆಗಳ ಪುನಶ್ಚೇತನ, ಶಾಲೆಗಳಿಗೆ ಶಿಕ್ಷಕರ ನೇಮಕ, ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ದೇವಾಲಯಗಳ ಜೀರ್ಣೋದ್ಧಾರ,ನೂತನ ದೇವಾಲಯಗಳ ನಿರ್ಮಾಣಕ್ಕೆ ನೆರವು ಮತ್ತಿತರ ಕಾರ್ಯಗಳನ್ನು ಮಾಡಲಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಅನಾಥರಿಗೆ ನೆರವಾಗುತ್ತಿದ್ದೇವೆ, ಪೂಜ್ಯ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ ಜಿಲ್ಲೆಯಲ್ಲಿ ನೂರಾರು ಮಂದಿಗೆ ಮಾಸಾಶನ ನೀಡಲಾಗುತ್ತಿದೆ ಎಂದ ಅವರು, ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ವೇಮಗಲ್ ವ್ಯಾಪ್ತಿಯಲ್ಲಿ ಸುಮಾರು ೬೦ ಜನ ಫಲಾನುಭವಿಗಳಿಗೆ ತಿಂಗಳಿಗೆ ಒಂದು ಸಾವಿರ ರೂಗಳಂತೆ ಮಾಶಾಸನ ಬರುತ್ತಿದ್ದು ಇಡಿ ರಾಜ್ಯದಲ್ಲಿ ೧೯,೦೦೦ ಫಲಾನುಭವಿಗಳು ಮಾಶಾಸನ ಪಡೆಯುತ್ತಿದ್ದಾರೆ ಎಂದರು.
ಮಾಸಾಶನದ ಜತೆಗೆ ಇಡೀ ರಾಜ್ಯಾದ್ಯಂತ ಸುಮಾರು ೭೦೦ ವಾತ್ಸಲ್ಯ ಸದಸ್ಯರು ಸೂರು ಇಲ್ಲದ ನಿರ್ಗತಿಕರಿಗೆ ವಾತ್ಸಲ್ಯ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ, ಜೊತೆಯಲ್ಲಿ ವಾತ್ಸಲ್ಯ ಕಿಟ್ಟು ಅಡುಗೆ ಪಾತ್ರೆಗಳು, ಬಟ್ಟೆ ಹೊದಿಕೆ ಚಾಪೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗಿದೆ ಎಂದರು.
ಯೋಜನಾಧಿಕಾರಿ ರಘು ಮಾತನಾಡಿ, ಸಿರಿಧಾನ್ಯಗಳ ಆಹಾರ ಪೂರೈಕೆ ವಾತ್ಸಲ್ಯ ಮಿಕ್ಸ್, ಜನ ಮಂಗಳ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ ಚೇತನರಿಗೆ, ವೀಲ್ ಚೇರ್, ವಾಟರ್ ಬೆಡ್, ಇತ್ಯಾದಿಗಳನ್ನು ಧರ್ಮಾಧಿಕಾರಿಗಳು ಪ್ರಸಾದ ರೂಪದಲ್ಲಿ ನೀಡುತ್ತಿರುವ ಹತ್ತು ಹಲವಾರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕಾಡಹಳ್ಳಿ ಆರ್.ಶಶಿಕುಮಾರ್ ಶಾಲೆಯ ಮುಖ್ಯೋಪಾಧ್ಯಾಯ ಮುನಿ ವೆಂಕಟಸ್ವಾಮಿ, ಸಹಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಜಿ.ಶಿಲ್ಪ, ಕ್ಯಾಲನೂರು ವಲಯದ ಮೇಲ್ವಿಚಾರಕಿ ನಾಗಮಣಿ, ಸ್ಥಳೀಯ ಸೇವಾ ಪ್ರತಿನಿಧಿ ಗುಣಶ್ರೀ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದ ಅನುದಾನಿತ ಶ್ರೀ ಚೌಡೇಶ್ವರಿ ಪ್ರೌಢಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನ ದೀಪ ಯೋಜನೆಯಡಿ ೧೦ ಡೆಸ್ಕ್ ಮತ್ತು ಬೆಂಚುಗಳನ್ನು ಯೋಜನೆಯ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ ವಿತರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್