ಹಿಟ್ನಾಳ ಮೇಲ್ಸೇತುವೆ ಕಾರ್ಯಕ್ರಮದ ಶಿಷ್ಟಾಚಾರ ವಿವಾದ : ಸಚಿವ ವಿ. ಸೋಮಣ್ಣ ಸ್ಪಷ್ಟನೆ
ಕೊಪ್ಪಳ, 05 ಜನವರಿ (ಹಿ.ಸ.) : ಆ್ಯಂಕರ್ : ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ನಡೆದ ರಸ್ತೆ ಮೇಲ್ಸೇತುವೆ (ಆರ್‌ಒಬಿ) ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಶಿಷ್ಟಾಚಾರ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿ ಕೇಂದ್ರ ಸಚಿವ ವಿ. ಸೋಮಣ್ಣ ಸ್ಪಷ್ಟನೆ ನೀಡಿದರು. “ನಾನು ಕಾರ್ಯಕ್ರಮಕ್ಕೆ ಬಂದ ತಕ್ಷಣ ಬ್ಯಾನರ್‌
ಹಿಟ್ನಾಳ ಮೇಲ್ಸೇತುವೆ ಕಾರ್ಯಕ್ರಮದ ಶಿಷ್ಟಾಚಾರ ವಿವಾದ : ಸಚಿವ ವಿ. ಸೋಮಣ್ಣ ಸ್ಪಷ್ಟನೆ


ಕೊಪ್ಪಳ, 05 ಜನವರಿ (ಹಿ.ಸ.) :

ಆ್ಯಂಕರ್ : ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ನಡೆದ ರಸ್ತೆ ಮೇಲ್ಸೇತುವೆ (ಆರ್‌ಒಬಿ) ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಶಿಷ್ಟಾಚಾರ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿ ಕೇಂದ್ರ ಸಚಿವ ವಿ. ಸೋಮಣ್ಣ ಸ್ಪಷ್ಟನೆ ನೀಡಿದರು. “ನಾನು ಕಾರ್ಯಕ್ರಮಕ್ಕೆ ಬಂದ ತಕ್ಷಣ ಬ್ಯಾನರ್‌ನಲ್ಲಿ ಹೆಸರುಗಳಿಲ್ಲ ಎಂಬ ವಿಚಾರ ತಿಳಿಸಲಾಯಿತು. ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರೂ ನನಗೂ ಮೊದಲೇ ಮಾಹಿತಿ ಇರಲಿಲ್ಲ” ಎಂದು ಅವರು ಹೇಳಿದರು.

ಶಿಲಾನ್ಯಾಸದ ಕಲ್ಲಿನಲ್ಲಿ ಎಲ್ಲ ಜನಪ್ರತಿನಿಧಿಗಳ ಹೆಸರುಗಳೂ ಉಲ್ಲೇಖವಾಗಿವೆ ಎಂದು ಸೋಮಣ್ಣ ತಿಳಿಸಿದರು.

“ಭೂಮಿಪೂಜೆ ನೆರವೇರಿಸಿ ಬಳಿಕ ಶಿಲಾನ್ಯಾಸ ಕಲ್ಲು ನೋಡಿದಾಗ ಎಲ್ಲರ ಹೆಸರುಗಳೂ ಇದ್ದವು. ತಂಗಡಗಿ ಹೇಳಿದ ತಕ್ಷಣ ಬೇಸರವಾಯಿತು. ಆದರೆ ಸ್ಥಳಕ್ಕೆ ಬಂದು ನೋಡಿದಾಗ ಹೆಸರುಗಳು ಇದ್ದುದರಿಂದ ಅಚ್ಚರಿಯಾಯಿತು. ಯಾಕೆ ಹೀಗೆ ಗೊಂದಲ ಉಂಟಾಯಿತು ಎನ್ನುವುದು ನನಗೆ ತಿಳಿದಿಲ್ಲ” ಎಂದು ಹೇಳಿದರು.

ಈ ಮೇಲ್ಸೇತುವೆ ಕಾಮಗಾರಿ ಸುಮಾರು 27 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿದ್ದು, ಈ ಸಂಪೂರ್ಣ ಅನುದಾನವನ್ನು ಕೇಂದ್ರ ಸರ್ಕಾರವೇ ನೀಡುತ್ತಿದೆ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.

“32 ಜಿಲ್ಲೆಗಳಲ್ಲಿ ಲೆವಲ್ ಕ್ರಾಸಿಂಗ್ ಗೇಟ್‌ಗಳು ಇರಬಾರದು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ” ಎಂದು ಹೇಳಿದರು.

ಬ್ಯಾನರ್ ವಿವಾದ ಕುರಿತು ಮಾತನಾಡಿದ ಅವರು, “ಬ್ಯಾನರ್‌ಗಳನ್ನು ಸಾಮಾನ್ಯವಾಗಿ ಪಕ್ಷದವರೇ ಹಾಕುತ್ತಾರೆ. ರೈಲ್ವೆ ಇಲಾಖೆಯವರು ಅಧಿಕೃತವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಫೋಟೋವನ್ನು ಮಾತ್ರ ಬಳಕೆ ಮಾಡುತ್ತಾರೆ” ಎಂದು ತಿಳಿಸಿದರು.

ಕಾರ್ಯಕ್ರಮದ ವೇಳೆ ಉಂಟಾದ ಗೊಂದಲದ ನಡುವೆಯೂ ಶಿಲಾನ್ಯಾಸ ಹಾಗೂ ಭೂಮಿಪೂಜೆ ಸಮರ್ಪಕವಾಗಿ ನೆರವೇರಿದೆ ಎಂದು ಸಚಿವ ಸೋಮಣ್ಣ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande