ಆಯುಷ್ಯ ಆಸ್ಪತ್ರೆಯ ಸಿಬ್ಬಂದಿ ಆತ್ಮಹತ್ಯೆ ; ಹತ್ತಾರು ಅನುಮಾನ
ಗದಗ, 03 ಜನವರಿ (ಹಿ.ಸ.) : ಆ್ಯಂಕರ್ : ಗದಗ ನಗರದ ಬೆಟಗೇರಿ ಸರ್ಕಾರಿ ಆಯುಷ್ಯ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, “ಜನವರಿ 01 ರಂದು ಮೂವರು ನನ್ನ
ಫೋಟೋ


ಗದಗ, 03 ಜನವರಿ (ಹಿ.ಸ.) :

ಆ್ಯಂಕರ್ : ಗದಗ ನಗರದ ಬೆಟಗೇರಿ ಸರ್ಕಾರಿ ಆಯುಷ್ಯ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, “ಜನವರಿ 01 ರಂದು ಮೂವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ” ಎಂದು ಉಲ್ಲೇಖಿಸಿರುವುದು ಪ್ರಕರಣಕ್ಕೆ ಗಂಭೀರ ತಿರುವು ನೀಡಿದೆ.

ಆತ್ಮಹತ್ಯೆ ಮಾಡಿಕೊಂಡಿರುವವರು ಆಯುಷ್ಯ ಆಸ್ಪತ್ರೆಯ ಹೊರಗುತ್ತಿಗೆ ಡಿ-ಗ್ರೂಪ್ ಸಿಬ್ಬಂದಿ, 36 ವರ್ಷದ ಮೈಲಾರಲಿಂಗೇಶ್ವರ ರಂಗಪ್ಪ.

ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಮುದುರೆ ಗ್ರಾಮದ ನಿವಾಸಿಯಾಗಿದ್ದು, ಕಳೆದ 6–7 ವರ್ಷಗಳಿಂದ ಬೆಟಗೇರಿಯ ಆಯುಷ್ಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಎಲ್ಲ ಸಿಬ್ಬಂದಿಗಳೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ, ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು ಎನ್ನಲಾಗಿದೆ.

ಆಸ್ಪತ್ರೆಯ ಒಳಗಡೆಯೇ ಒಂದು ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮುಂಜಾನೆ ಸಿಬ್ಬಂದಿ, ಆಸ್ಪತ್ರೆಗೆ ಬಂದಾಗ ಕೊಠಡಿ ಲಾಕ್ ಆಗಿರುವುದು ಕಂಡು ಅನುಮಾನಗೊಂಡಿದ್ದು, ವಿಷಯ ಬೆಳಕಿಗೆ ಬಂದಿದೆ. ನಂತರ ಚಿತ್ರದುರ್ಗ ಜಿಲ್ಲೆಯಿಂದ ಮೃತನ ತಂದೆ ಹಾಗೂ ಸಂಬಂಧಿಕರು ಆಗಮಿಸಿದ ಬಳಿಕ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಆತ್ಮಹತ್ಯೆಯ ಸಂಗತಿ ದೃಢಪಟ್ಟಿದೆ.

ಸ್ಥಳದಲ್ಲೇ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ “ಇಲ್ಲಿನ ಆಸ್ಪತ್ರೆ ಸಿಬ್ಬಂದಿಗಳು ಒಳ್ಳೆಯವರು, ಆದರೆ ಜನವರಿ 01 ರಂದು ಮೂವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ” ಎಂದು ಬರೆಯಲಾಗಿದೆ.

ಆದರೆ ಹಲ್ಲೆ ನಡೆಸಿದವರ ಹೆಸರು ಅಥವಾ ವಿವರವನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.

ಮೈಲಾರಲಿಂಗೇಶ್ವರ ಹಲ್ಲೆಯಿಂದ ಅವಮಾನಗೊಂಡು ಮನನೊಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಬೆಟಗೇರಿ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಆರಂಭಿಸಿದ್ದಾರೆ.

ಡೆತ್ ನೋಟ್ ಅಸ್ಪಷ್ಟವಾಗಿರುವುದು ಹಾಗೂ ಹಲ್ಲೆ ನಡೆಸಿದ ಮೂವರು ಯಾರು ಎಂಬುದು ತಿಳಿಯದೇ ಇರುವುದರಿಂದ ಪ್ರಕರಣ ಇನ್ನಷ್ಟು ಗಂಭೀರವಾಗಿದೆ.

ಆಯುಷ್ಯ ಆಸ್ಪತ್ರೆಯ ಹೊರಗುತ್ತಿಗೆ ನೌಕರನ ಸಾವಿನ ಹಿಂದೆ ಇರುವ ನಿಜವಾದ ಕಾರಣ ಪತ್ತೆಯಾಗಬೇಕೆಂಬ ಒತ್ತಾಯ ವ್ಯಕ್ತವಾಗಿದ್ದು, ಜನವರಿ 01 ರಂದು ನಡೆದಿರುವುದಾಗಿ ಹೇಳಲಾಗಿರುವ ಹಲ್ಲೆಯ ಹಿಂದಿನ ಸತ್ಯವನ್ನು ಪೊಲೀಸರು ಪತ್ತೆ ಹಚ್ಚಬೇಕು ಎಂದು ಸಾರ್ವಜನಿಕರು ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಸಮಗ್ರ ತನಿಖೆಯ ನಂತರವೇ ಆತ್ಮಹತ್ಯೆಯ ನಿಖರ ಕಾರಣ ಬೆಳಕಿಗೆ ಬರಬೇಕಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande