
ಗದಗ, 04 ಜನವರಿ (ಹಿ.ಸ.) :
ಆ್ಯಂಕರ್ : ಮನೆಯಲ್ಲಿ ಒಂದು ಹಸು ಇದ್ದರೆ ಅದು ಇಡಿ ಕುಟುಂಬದ ಆರ್ಥಿಕ ಶಕ್ತಿಯಾಗಿರುತ್ತದೆ. ಅದ್ದರಿಂದ ಎಲ್ಲರೂ ಹಸುಗಳನ್ನು ಸಾಕುವ ಮೂಲಕ ಕುಟುಂಬದ ಆರೋಗ್ಯ ಕಾಪಾಡಿಕೊಂಡು ಮತ್ತು ಆರ್ಥಿಕ ಸದೃಡತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯತ ಮಾಜಿ ಅಧ್ಯಕ್ಷರಾದ ಬಿ.ಆರ್.ದೇವರಡ್ಡಿ ಅವರು ಹೇಳಿದರು.
ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ಬೃಹತ್ ಮಿಶ್ರತಳಿ ಮತ್ತು ದೇಶಿತಳಿ ಜಾನುವಾರುಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹಿಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದರಿಂದ ಇಡಿ ಕುಟುಂಬವು ಹಾಲು, ಬೆಣ್ಣೆ, ತುಪ್ಪ, ಮೊಸರು ಸೇವಿಸಿ ಆರೋಗ್ಯದಿಂದ ಇರುತ್ತಿದ್ದರು. ಆದರೆ, ಈಗ ಕಾಲ ಬದಲಾದಂತೆ ಇಂದು ಮನೆಯಲ್ಲಿ ಇರಬೇಕಾದ ಹಸುಗಳು ರಸ್ತೆಯಲ್ಲಿವೆ, ರಸ್ತೆಯಲ್ಲಿ ಇರಬೇಕಾದ ಪ್ರಾಣಿಗಳು ಮನೆಯಲ್ಲಿವೆ. ಈಗಲಾದರೂ ನಾವುಗಳು ಎಚ್ಚೆತ್ತುಕೊಂಡು ಮನೆಮುಂದೆ ಜಾಗವಿದ್ದರೆ ಹಸುಗಳನ್ನು ಸಾಕಿ ಇಡಿ ಕುಟುಂಬವನ್ನು ಆರೋಗ್ಯವಂತರನ್ನಾಗಿ ಮಾಡಬಹುದು ಎಂದು ಹೇಳಿದರು.
ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್. ವೈ. ಹೊನ್ನಿನಾಯ್ಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಹಾಲು ಉತ್ಪಾಧನೆ ಹೆಚ್ಚಿಸಲು, ಜಾನುವಾರುಗಳ ಆರೋಗ್ಯ ರಕ್ಷಣೆ, ಲಸಿಕೆ, ಕರುಗಳ ಪಾಲನೆ ಮತ್ತು ರೈತ ಮಹಿಳೆಯರಿಗೆ ಇಲಾಖೆಯಲ್ಲಿರುವ ಸರಕಾರಿ ಸವಲತ್ತುಗಳ ಕುರಿತು ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಜಾನುವಾರು ಪ್ರದರ್ಶನದಲ್ಲಿ ಎಚ್.ಎಫ್. ಆಕಳುಗಳ ವಿಭಾಗದಲ್ಲಿ 96, ಜರ್ಸಿ ವಿಭಾಗದಲ್ಲಿ 64 ಮತ್ತು ಸ್ಥಳೀಯ ತಳಿಗಳ ವಿಭಾಗದಲ್ಲಿ 20 ಜಾನುವಾರಗಳು ಪ್ರದರ್ಶನಕ್ಕೆ ಬಂದಿವೆ. ರೈತರು ಈ ಜಾನುವಾರುಗಳ ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಾಗಾವಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಉಳವಪ್ಪ ಶಿಗ್ಲಿ ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ಹುಸೇನಸಾಬ್ ನದಾಫ್, ಶ್ರೀಮತಿ ಪಾರವ್ವ ಗೊರವರ, ಶ್ರೀಮತಿ ಹನುಮವ್ವ ಸಿದ್ನೆಕೊಪ್ಪ ಹಾಗೂ ಹಲವಾರು ಸದಸ್ಯರು, ಗ್ರಾಮದ ಹಿರಿಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಾನುವಾರು ಪ್ರದರ್ಶನಕ್ಕೆ ಸ್ಥಳಾವಕಾಶ ನೀಡಿದ ಮರಿಯಪ್ಪ ಸಿದ್ನೆಕೊಪ್ಪ ಅವರನ್ನು ಸನ್ಮಾನಿಸಲಾಯಿತು. ಗದಗ ಜಿಲ್ಲೆಯ ತಾಲ್ಲೂಕುಗಳ ಪಶುವೈದ್ಯಾಧಿಕಾರಿಗಳು ಆಗಮಿಸಿದ್ದರು. ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ. ಎನ್.ಎಸ್.ಗೌರಿ, ಡಾ. ಸಂತೋಷ ಕುಂದರಗಿ, ಡಾ. ಮಂಜುನಾಥ ಮೇಟಿ, ಡಾ. ರಾಠೋಡ, ಡಾ. ಬಾಬಾಜಾನ ಕುರಹಟ್ಟಿ, ಡಾ. ಮುದೋಳಕರ, ಡಾ. ಶಿವದರ್ಶನ, ಡಾ. ಮಡಿವಾಳರ, ನಿರ್ಣಾಯಕರಾಗಿ ಆಗಮಿಸಿದ್ದರು. ಡಾ. ಬಸನಗೌಡ ಸ್ವಾಗತಿಸಿದರು.
ಡಾ. ಗಾಣಗೇರ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ. ಉಮೇಶ ತೀರ್ಲಾಪೂರ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಜೆ.ಎಸ್.ಮಟ್ಟಿ, ಡಾ. ತಾಂಬೋಳಿ, ಸರಗಣಾಚಾರಿ, ಚಿಕ್ಕಾಡಿ, ಜಾನುವಾರು ಅಭಿವೃದ್ದಿ ಅಧಿಕಾರಿಗಳಾದ ಅರಕೇರಿ, ಬಿರಾದಾರ, ಸತೀಶ ಕಟ್ಟಿಮನಿ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP