
ನವದೆಹಲಿ, 02 ಜನವರಿ (ಹಿ.ಸ.) :
ಆ್ಯಂಕರ್ : ಮುಂಬೈ–ಅಹಮದಾಬಾದ್ ಹೈ ಸ್ಪೀಡ್ ರೈಲು (ಬುಲೆಟ್ ರೈಲು) ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಾಗಿದ್ದು, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ಮತ್ತು ಬೋಯಿಸರ್ ಬುಲೆಟ್ ರೈಲು ನಿಲ್ದಾಣಗಳ ನಡುವಿನ ಸುಮಾರು 1.5 ಕಿಲೋಮೀಟರ್ ಉದ್ದದ ಪರ್ವತ ಸುರಂಗ (ಮೌಂಟೇನ್ ಟನಲ್–5) ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಇದು ಮಹಾರಾಷ್ಟ್ರದಲ್ಲಿ ಬುಲೆಟ್ ರೈಲು ಯೋಜನೆಯ ಮೊದಲ ಪರ್ವತ ಸುರಂಗವಾಗಿದೆ. ಸಂಪೂರ್ಣ ಯೋಜನೆಯನ್ನು 2027ರ ಆಗಸ್ಟ್ 15ರೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ಶುಕ್ರವಾರ ರೈಲು ಭವನದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಯ ಪ್ರಗತಿ ಪರಿಶೀಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು, ಈ ಸಾಧನೆಯನ್ನು ಯೋಜನೆಗೆ ಐತಿಹಾಸಿಕ ಹಂತವೆಂದು ಬಣ್ಣಿಸಿದರು.
“ಈ ಸುರಂಗ ಪೂರ್ಣಗೊಂಡಿರುವುದರಿಂದ ಥಾಣೆಯಿಂದ ಅಹಮದಾಬಾದ್‌ವರೆಗಿನ ಸಂಪೂರ್ಣ ಭೂಭಾಗದ ಕೆಲಸ ತೆರವುಗೊಂಡಿದೆ. ಇದೀಗ ಮುಂಬೈ ಮತ್ತು ಥಾಣೆ ನಡುವಿನ ಸಮುದ್ರದಡಿ ಸುರಂಗ ವಿಭಾಗ ಮಾತ್ರ ಬಾಕಿಯಾಗಿದೆ” ಎಂದು ತಿಳಿಸಿದರು.
ಪಾಲ್ಘರ್ ಜಿಲ್ಲೆಯ ಅತಿ ಉದ್ದದ ಸುರಂಗಗಳಲ್ಲಿ ಮೌಂಟೇನ್ ಟನಲ್–5 ಒಂದಾಗಿದ್ದು, ಅತ್ಯಾಧುನಿಕ ‘ಡ್ರಿಲ್ ಅಂಡ್ ಬ್ಲಾಸ್ಟ್’ ತಂತ್ರಜ್ಞಾನ ಬಳಸಿ ಎರಡೂ ತುದಿಗಳಿಂದ ಅಗೆದು ಕೇವಲ 18 ತಿಂಗಳಲ್ಲಿ ನಿರ್ಮಿಸಲಾಗಿದೆ. ಈ ತಂತ್ರಜ್ಞಾನವು ಉತ್ಖನನದ ವೇಳೆ ನೆಲದ ಪರಿಸ್ಥಿತಿಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲು ಅನುಕೂಲವಾಗಿದ್ದು, ಅಗತ್ಯವಿದ್ದಾಗ ಶಾಟ್‌ಕ್ರೀಟ್, ರಾಕ್ ಬೋಲ್ಟ್‌ಗಳು ಮತ್ತು ಲ್ಯಾಟಿಸ್ ಗಿರ್ಡರ್‌ಗಳಂತಹ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ನಿರ್ಮಾಣದ ಅವಧಿಯಲ್ಲಿ ವಾತಾಯನ ಹಾಗೂ ಅಗ್ನಿ ಸುರಕ್ಷತೆ ಸೇರಿದಂತೆ ಎಲ್ಲಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ ಎಂದು ಸಚಿವರು ಹೇಳಿದರು.
ಈ ಹಿಂದೆ, ಥಾಣೆ ಮತ್ತು ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ನಡುವಿನ ಸುಮಾರು ಐದು ಕಿಲೋಮೀಟರ್ ಉದ್ದದ ಮೊದಲ ಭೂಗತ ಸುರಂಗವನ್ನು 2025ರ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಲಾಗಿತ್ತು. ಒಟ್ಟು 508 ಕಿಲೋಮೀಟರ್ ಉದ್ದದ ಮುಂಬೈ–ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್‌ನಲ್ಲಿ 27.4 ಕಿಲೋಮೀಟರ್ ಸುರಂಗಗಳಿದ್ದು, ಇದರಲ್ಲಿ 21 ಕಿಲೋಮೀಟರ್ ಭೂಗತ ಹಾಗೂ 6.4 ಕಿಲೋಮೀಟರ್ ಮೇಲ್ಮೈ ಸುರಂಗಗಳು ಸೇರಿವೆ. ಯೋಜನೆಯಲ್ಲಿ ಒಟ್ಟು ಎಂಟು ಪರ್ವತ ಸುರಂಗಗಳಿದ್ದು, ಏಳು ಮಹಾರಾಷ್ಟ್ರದಲ್ಲಿ (ಸುಮಾರು 6.05 ಕಿಲೋಮೀಟರ್) ಮತ್ತು ಒಂದು ಗುಜರಾತ್‌ನಲ್ಲಿ 350 ಮೀಟರ್ ಉದ್ದದಲ್ಲಿದೆ.
ಬುಲೆಟ್ ರೈಲು ಯೋಜನೆಯಲ್ಲಿ ಒಟ್ಟು 12 ನಿಲ್ದಾಣಗಳಿದ್ದು, ಮುಂಬೈ (ಬಿಕೆಸಿ), ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಮತ್ತು ಸಬರಮತಿ ಸೇರಿವೆ. ಮುಂಬೈನಲ್ಲಿ ಬಿಕೆಸಿ ಮತ್ತು ಅಹಮದಾಬಾದ್‌ನಲ್ಲಿ ಸಾಬರಮತಿ ಟರ್ಮಿನಲ್ ನಿಲ್ದಾಣಗಳಾಗಿವೆ. ಸಾಮಾನ್ಯವಾಗಿ ಎರಡು ಡಿಪೋಗಳು ಸಾಕಾಗುತ್ತಿದ್ದರೂ, ಹಿಂದಿನ ಅವಧಿಯಲ್ಲಿ ಅನುಮತಿಗಳ ವಿಳಂಬದಿಂದ ಮೂರು ಡಿಪೋಗಳನ್ನು ನಿರ್ಮಿಸಬೇಕಾಯಿತು ಎಂದು ಸಚಿವರು ವಿವರಿಸಿದರು.
ಜಪಾನ್ ತಂತ್ರಜ್ಞಾನ ಆಧಾರಿತ ಈ ಬುಲೆಟ್ ರೈಲು ಗಂಟೆಗೆ 320 ಕಿಲೋಮೀಟರ್ ವೇಗದಲ್ಲಿ ಸಂಚರಿಸಲಿದ್ದು, ಮುಂಬೈ–ಅಹಮದಾಬಾದ್ ನಡುವಿನ ಪ್ರಯಾಣ ಸಮಯವನ್ನು ಪ್ರಸ್ತುತ 7–8 ಗಂಟೆಗಳಿಂದ ಸುಮಾರು 1 ಗಂಟೆ 58 ನಿಮಿಷಗಳಿಗೆ ಇಳಿಸಲಿದೆ. “ಇದು ಮಧ್ಯಮ ವರ್ಗದ ಪ್ರಯಾಣಿಕರಿಗೆ ಕೈಗೆಟುಕುವ, ಆರಾಮದಾಯಕ ಹಾಗೂ ವೇಗದ ಪ್ರಯಾಣದ ಆಯ್ಕೆಯಾಗಿ ರೂಪುಗೊಳ್ಳಲಿದೆ” ಎಂದು ಅಶ್ವಿನಿ ವೈಷ್ಣವ್ ಹೇಳಿದರು.
ಪರಿಸರ ಮತ್ತು ಆರ್ಥಿಕ ಲಾಭಗಳನ್ನೂ ಉಲ್ಲೇಖಿಸಿದ ಸಚಿವರು, ಬುಲೆಟ್ ರೈಲು ರಸ್ತೆ ಸಾರಿಗೆಗೆ ಹೋಲಿಸಿದರೆ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಶೇಕಡಾ 95ರಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು. ಈ ಯೋಜನೆಯು ಕಾರಿಡಾರ್ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಿ, ಉದ್ಯೋಗ ಸೃಷ್ಟಿ ಹಾಗೂ ಹೊಸ ಕೈಗಾರಿಕಾ ಮತ್ತು ಐಟಿ ಕೇಂದ್ರಗಳ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸದಾ ಹೊಸ ವಿಧಾನಗಳು, ಗುಣಮಟ್ಟ ಮತ್ತು ತಂತ್ರಜ್ಞಾನದಲ್ಲಿ ಉನ್ನತ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಒತ್ತು ನೀಡುತ್ತಿದ್ದಾರೆ. ಬುಲೆಟ್ ರೈಲು ಯೋಜನೆಯು ಅದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ರೈಲ್ವೆ ಸಚಿವರು ಹೇಳಿದರು. “ಯೋಜನೆಯನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು. ಮೊದಲಿಗೆ ಸೂರತ್–ಬಿಲಿಮೋರಾ, ನಂತರ ವಾಪಿ–ಸೂರತ್, ವಾಪಿ–ಅಹಮದಾಬಾದ್, ಥಾಣೆ–ಅಹಮದಾಬಾದ್ ಮತ್ತು ಅಂತಿಮವಾಗಿ ಮುಂಬೈ–ಅಹಮದಾಬಾದ್ ವಿಭಾಗ ಪೂರ್ಣಗೊಳ್ಳಲಿದೆ” ಎಂದು ಮಾಹಿತಿ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa