
ನವದೆಹಲಿ, 02 ಜನವರಿ (ಹಿ.ಸ.) :
ಆ್ಯಂಕರ್ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೀವ್ರ ಚಳಿಗಾಲ ಮುಂದುವರಿದಿದ್ದು, ವಾಯು ಮಾಲಿನ್ಯವೂ ಅಪಾಯಕಾರಿ ಮಟ್ಟದಲ್ಲೇ ದಾಖಲಾಗಿದೆ.
ಬೆಳಿಗ್ಗೆ ದಟ್ಟ ಮಂಜು ಆವರಿಸಿದ ಪರಿಣಾಮ ಹಲವು ಪ್ರದೇಶಗಳಲ್ಲಿ ಗೋಚರತೆ ಗಣನೀಯವಾಗಿ ಕುಸಿದಿತ್ತು. ಇಂತಹ ಸವಾಲಿನ ಹವಾಮಾನ ಪರಿಸ್ಥಿತಿಗಳ ನಡುವೆಯೂ ಇಂಡಿಯಾ ಗೇಟ್‌ನಲ್ಲಿ ಗಣರಾಜ್ಯೋತ್ಸವದ ಪೂರ್ವಾಭ್ಯಾಸ ನಿರಂತರವಾಗಿ ನಡೆಯಿತು.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ ದೆಹಲಿಯ ತಾಪಮಾನ ಸುಮಾರು 11 ಡಿಗ್ರಿ ಸೆಲ್ಸಿಯಸ್ ಇತ್ತು. ಬೆಳಗಿನ ಜಾವ ದಟ್ಟ ಮಂಜು ವ್ಯಾಪಿಸಿದ್ದು, ದಿನವಿಡೀ ಮಂಜಿನ ಪದರ ಮುಂದುವರಿಯುವ ಸಾಧ್ಯತೆ ಇದೆ. ಆದರೆ ನಾಳೆಯಿಂದ ಹವಾಮಾನದಲ್ಲಿ ಸ್ವಲ್ಪ ಸುಧಾರಣೆ ಕಾಣುವ ನಿರೀಕ್ಷೆಯಿದೆ.
ಇಂದಿನ ದಿನ ದೆಹಲಿಯ ಗರಿಷ್ಠ ತಾಪಮಾನ 15ರಿಂದ 17 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 9ರಿಂದ 11 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಅಂದಾಜಿಸಲಾಗಿದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚು ಇರುವ ಸಾಧ್ಯತೆ ಇದ್ದರೂ, ಗರಿಷ್ಠ ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯೇ ಉಳಿಯುವ ನಿರೀಕ್ಷೆಯಿದೆ.
ಇತ್ತ, ಹೊಸ ವರ್ಷದ ಎರಡನೇ ದಿನವೂ ದೆಹಲಿಯ ಗಾಳಿಯ ಗುಣಮಟ್ಟ ‘ತುಂಬಾ ಕಳಪೆ’ ವರ್ಗದಲ್ಲಿಯೇ ಉಳಿದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಹಿತಿ ಪ್ರಕಾರ, ಬೆಳಿಗ್ಗೆ 8 ಗಂಟೆಯ ಸುಮಾರಿಗೆ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 348ಕ್ಕೆ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa