
ಬೆಂಗಳೂರು, 19 ಜನವರಿ (ಹಿ.ಸ.) :
ಆ್ಯಂಕರ್ : ಶಾಲೆಗೆ ಮಗನನ್ನು ಬಿಡಲು ತೆರಳುತ್ತಿದ್ದ ವೇಳೆ ಖಾಸಗಿ ಕಾಲೇಜು ಬಸ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಎಂಟು ವರ್ಷದ ಮಗ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ವಿವೇಕನಗರ ಮುಖ್ಯ ರಸ್ತೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ಸಂಗೀತಾ (37) ಹಾಗೂ ಅವರ ಪುತ್ರ ಪಾರ್ಥ (8) ಮೃತರಾಗಿದ್ದಾರೆ. ಸಂಗೀತಾ ಅವರು ಬೆಂಗಳೂರಿನ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಇಬ್ಬರು ಮಕ್ಕಳನ್ನೂ ಅದೇ ಶಾಲೆಯಲ್ಲಿ ದಾಖಲಿಸಿದ್ದರು.
ಇಂದು ಬೆಳಿಗ್ಗೆ ಸಂಗೀತಾ ಅವರು ಮಗ ಪಾರ್ಥನೊಂದಿಗೆ ಶಾಲೆಗೆ ತೆರಳಲು ವಿವೇಕನಗರ ಮುಖ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ, ಅತಿವೇಗವಾಗಿ ಬಂದ ಖಾಸಗಿ ಕಾಲೇಜಿನ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದ ತಾಯಿ–ಮಗ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಅಶೋಕನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಬೋರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತಕ್ಕೆ ಕಾರಣವಾದ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa